ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ಅವರು ಅನೌಪಚಾರಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸಕ್ಕೆ ಇಂದು ಆಗಮಿಸಿದ ಶ್ರೀಗಳು, ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು. ನಿನ್ನೆಯಷ್ಟೇ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಇದರಲ್ಲಿ ಜೆಡಿಎಸ್ ಯಾವುದೇ ಕ್ಷೇತ್ರ ಗೆಲ್ಲಲು ಸಾಧ್ಯವಾಗದೇ ಶೂನ್ಯ ಸಂಪಾದನೆ ಮಾಡಿತ್ತು. ಇದರಿಂದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಬೇಸರಗೊಂಡಿದ್ದರು. ಹಾಗಾಗಿ ನಿರ್ಮಾಲಾನಂದ ಶ್ರೀಗಳು ಇಂದು ಗೌಡರನ್ನು ಭೇಟಿ ಮಾಡಿದ ವೇಳೆ, ಉಪಚುನಾವಣೆ ಫಲಿತಾಂಶ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.
ಇದೇ ವೇಳೆ, ಧೃತಿಗೆಡದಂತೆ ಶ್ರೀಗಳು ದೇವೇಗೌಡರಿಗೆ ಧೈರ್ಯ ತುಂಬಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಇಡೀ ದಿನ ಗೌಡರು ಮನೆಯಿಂದ ಹೊರಬರದೇ ಮಾಧ್ಯಮಗಳಲ್ಲಿ ಬರುತ್ತಿದ್ದ ಉಪಚುನಾವಣೆ ಫಲಿತಾಂಶ ವೀಕ್ಷಿಸಿದ್ದರು. ಬಿಜೆಪಿ 12 ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿವೆ. ಕೆ.ಆರ್.ಪೇಟೆ, ಮಹಾಲಕ್ಷ್ಮಿ ಲೇಔಟ್ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸದಲ್ಲಿದ್ದ ಗೌಡರಿಗೆ ನಿರಾಸೆಯಾಗಿದ್ದು, ಇದೀಗ ಮೌನಕ್ಕೆ ಶರಣಾಗಿದ್ದಾರೆ.