ಬೆಂಗಳೂರು: ಆನೇಕಲ್ ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಬಪಾ) ಮೃಗಾಲಯದ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯನ್ನು ತಿಳಿಸಲು ಸಂತೋಷ ವ್ಯಕ್ತಪಡಿಸುತ್ತಿದೆ. ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಚೆನ್ನೈನ ವಂಡಲೂರ್ ಅರಿಗ್ನಾರ್ ಅಣ್ಣಾ ಝೂಯಾಲಾಜಿಕಲ್ ಪಾರ್ಕ್‌ನಿಂದ ಬಿಳಿ ರಾಯಲ್ ಬಂಗಾಳ ಗಂಡು ಹುಲಿಯನ್ನು ತರಲಾಗಿದೆ ಎಂದು ಬನ್ನೇರುಘಟ್ಟ ಮೃಗಾಲಯ ಇಡಿ ಪ್ರಕಟಿಸಿದ್ದಾರೆ.
ಬನ್ನೇರುಘಟ್ಟ ಉದ್ಯಾನದಲ್ಲಿನ 2020 ರಲ್ಲಿ ಸನಾ ಮತ್ತು ಶಂಕರ್ ಸಿಂಹಗಳಿಗೆ ಜನಿಸಿದ ಗಂಡು ಸಿಂಹ ಶೇರ್-ಯಾರ್ ಅನ್ನು ವಂಡಲೂರು ಮೃಗಾಲಯಕ್ಕೆ ಸ್ಥಳಾಂತರಿಸಿ, ವಂಡಲೂರು ಮೃಗಾಲಯದ ಭೀಷ್ಮಾ ಮತ್ತು ಮೀನಾಗೆ ಜನಿಸಿರುವ ಸುಮಾರು 3 ವರ್ಷ ವಯಸ್ಸಿನ ಈ ಬಿಳಿ ಹುಲಿಯನ್ನು ತರಲಾಗಿದೆ. ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳಲು ಈ ಹೊಸ ನಿವಾಸಿಯನ್ನು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಇರಿಸಲಾಗಿದೆ ಮತ್ತು ನಿರಂತರ ವೀಕ್ಷಣೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ಮೃಗಾಲಯದಲ್ಲಿ ಮರಿಗಳೊಂದಿಗೆ ಬಿಳಿ ಹುಲಿಯ ಚೆಲ್ಲಾಟ: ಇನ್ನೊಂದೆಡೆ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ರಾಕಿ ಮತ್ತು ಬಿಳಿ ಹುಲಿ ತಾರಾ ಜೋಡಿಗೆ (ಫೆಬ್ರವರಿ 3-2023) ರಂದು ಮೂರು ಮರಿಗಳು ಜನಿಸಿದ್ದವು. ಈ ಮರಿಗಳನ್ನು ಶನಿವಾರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ಅಮ್ಮನೊಂದಿಗೆ ಮರಿಗಳ ಚೆಲ್ಲಾಟ ಪ್ರವಾಸಿಗರ ಗಮನ ಸೆಳೆದಿತ್ತು. ಬಿಳಿ ಹುಲಿಯನ್ನು 2018ರಲ್ಲಿ ಪ್ರಾಣಿ ವಿನಿಮಯ ಯೋಜನೆಯಡಿ ಚೆನ್ನೈ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆ ತರಲಾಗಿತ್ತು.
ಹೆಣ್ಣು ಹುಲಿಗೆ ಮೈಸೂರಿನ ಹುಣಸೂರು ಅರಣ್ಯ ವಲಯದಲ್ಲಿ 2018ರಲ್ಲಿ ಗಂಡು ಹುಲಿ ರಾಕಿಯನ್ನು ಸಂತಾನ ಅಭಿವೃದ್ಧಿಗಾಗಿ ಬಳಸಲಾಗಿತ್ತು. ತಾರಾ ಕಳೆದ ಎಂಟು ತಿಂಗಳ ಹಿಂದೆ ಮೂರು ಹುಲಿ ಮರಿಗಳಿಗೆ ಜನ್ಮ ನೀಡಿದ್ದಳು. ಇದರಲ್ಲಿ 1 ಗಂಡು ಹಾಗು 2 ಹೆಣ್ಣು ಹುಲಿ ಮರಿಗಳು ಸೇರಿದ್ದವು. ಇವುಗಳು 30 ರಿಂದ 35 ಕೆಜಿ ತೂಕ ಹೊಂದಿದ್ದು ಆರೋಗ್ಯವಾಗಿವೆ ಎಂಬುದು ತಿಳಿದುಬಂದಿತ್ತು.
ಮೈತ್ರಿ ಬಾಗ್ ಮೃಗಾಲಯದಲ್ಲಿ 2 ತಿಂಗಳ ಬಿಳಿ ಹುಲಿ ಸಂಭ್ರಮ: ಇನ್ನೊಂದೆಡೆ ಛತ್ತೀಸ್‌ಗಢದ ಬಿಲಾಯ್ ಜಿಲ್ಲೆಯ ಮೈತ್ರಿಭಾಗ್ ಮೃಗಾಲಯದಿಂದ ಬಳಿ ಹುಲಿ ಮರಿಯನ್ನು ( ಫೆಬ್ರವರಿ 3-2023)ರಂದು ಬಿಡುಗಡೆ ಮಾಡಲಾಗಿತ್ತು.
ರೋಮಾ ಹೆಸರಿನ ಹೆಣ್ಣು ಹುಲಿ ಮತ್ತು ಸುಲ್ತಾನ್ ಹೆಸರಿನ ಗಂಡು ಹುಲಿಗೆ ಜನಿಸಿದ ಈ ಮರಿಹುಲಿಯೇ ‘ಸಿಂಗಮ್. ಸೆಪ್ಟೆಂಬರ್ 5 ರಂದು ಮರಿ ಜನಿಸಿದ್ದು, ಆರೋಗ್ಯವಾಗಿದೆ ಎಂದು ಮೈತ್ರಿ ಬಾಗ್ ಮೃಗಾಲಯದ ಉಸ್ತುವಾರಿ ಎನ್ ಕೆ ಜೈನ್ ಮಾಹಿತಿ ನೀಡಿದ್ದರು.
ಜೊತೆಗೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹುಲಿಗಳ ಸಂತಾನೋತ್ಪತ್ತಿಯನ್ನು ಕಳೆದ ಎರಡು ವರ್ಷಗಳಿಂದ ನಿಲ್ಲಿಸಲಾಗಿದೆ ಎಂದಿದ್ದರು. ಸುಮಾರು ಆರು ವರ್ಷಗಳಿಂದ ಉದ್ಯಾನವನದಲ್ಲಿ ವಾಸಿಸುತ್ತಿರುವ ಶಿಲಾ ಎಂಬ ಹುಲಿ ಈ ವರ್ಷದ ಮಾರ್ಚ್ 22 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ನಾಲ್ಕು ಹುಲಿ ಮರಿಗಳನ್ನು ಸಿಲಿಗುರಿಯ ಬಳಿ ಬೆಂಗಾಲ್ ಸಫಾರಿಯ ತೆರೆದ ಆವರಣದಲ್ಲಿ ಬಿಡಲಾಗಿತ್ತು.
ಇದನ್ನೂ ಓದಿ : ಮೈತ್ರಿ ಬಾಗ್ ಮೃಗಾಲಯದಲ್ಲಿ 2 ತಿಂಗಳ ಬಿಳಿ ಹುಲಿ 'ಸಿಂಗಮ್' ಸಂಭ್ರಮ- ವಿಡಿಯೋ