ಬೆಂಗಳೂರು: ಕನ್ನಡ ಚಿತ್ರೋದ್ಯಮದಲ್ಲಿ ಯಾರೂ ಕೂಡ ಡ್ರಗ್ಸ್ ಸೇವಿಸಿ ಚಿತ್ರೀಕರಣಕ್ಕೆ ಬಂದಿದ್ದನ್ನು ನಾನು ಈವರೆಗೂ ನೋಡಿಯೇ ಇಲ್ಲ. ಇಂದ್ರಜಿತ್ ಲಂಕೇಶ್ ಹೇಳಿಕೆ ವೈಯಕ್ತಿಕವಾಗಿದ್ದು, ಅದರ ಬಗ್ಗೆ ನನಗೇನು ಗೊತ್ತಿಲ್ಲವೆಂದು ಚಿತ್ರನಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರ ಅನುರಾಧಾ ಹೇಳಿದ್ದಾರೆ.
ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನಟಿ ತಾರ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸ ಕಾವೇರಿಗೂ ಭೇಟಿ ನೀಡಿದ್ದರು. ಆದರೆ ಸಿಎಂ ವಿಶ್ರಾಂತಿಯಲ್ಲಿ ಇರುವ ಕಾರಣ ಭೇಟಿಗೆ ಅವಕಾಶ ಸಿಗಲಿಲ್ಲ.
ಇದೇ ವೇಳೆ ಸಿಎಂ ನಿವಾಸಕ್ಕೆ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಡ್ರಗ್ಸ್ ದಂಧೆ ನಿಯಂತ್ರಿಸುವಂತೆ ಮನವಿ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಾರ, ಈಗಾಗಲೇ ತನಿಖೆ ನಡೆಯುತ್ತಿದೆ, ಶಾಲಾ ಮಕ್ಕಳನ್ನು ಹೇಗೆ ಡ್ರಗ್ಸ್ ಜಾಲದಿಂದ ಪಾರು ಮಾಡಬಹುದು, ಯಾವ ಯಾವ ದೇಶದಲ್ಲಿ ಏನೇನು ಕ್ರಮ ಇದೆ ಎಂಬ ಬಗ್ಗೆ ಸಲಹೆ ಕೊಟ್ಟಿದ್ದೇನೆ. ಡ್ರಗ್ಸ್ ಮುಕ್ತ ರಾಜ್ಯವಾಗಿ ಮಾಡುತ್ತೇವೆ ಎಂದು ಗೃಹ ಸಚಿವರು ಭರವಸೆ ಕೊಟ್ಟಿದ್ದಾರೆ ಎಂದರು.
ಸಿನಿಮಾ ರಂಗದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ನೋಡಿದ ಪ್ರಕಾರ ಯಾವುದೇ ಕಲಾವಿದ, ತಂತ್ರಜ್ಞ, ಡ್ರಗ್ಸ್ ಸೇವಿಸಿ ಚಿತ್ರೀಕರಣಕ್ಕೆ ಬಂದಿಲ್ಲ, ಇಂದ್ರಜಿತ್ ಲಂಕೇಶ್ ಹೇಳಿಕೆ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಏನಾದರೂ ಗೊತ್ತಿದ್ದರೆ ಆ ಸತ್ಯಗಳನ್ನು ಸರ್ಕಾರ ಹೊರತೆಗೆಯಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ನಲ್ಲಿ ಡ್ರಗ್ ವಿಚಾರ ಚರ್ಚೆಯಾಗಿದ್ದ ಕುರಿತು ಪ್ರಸ್ತಾಪಿಸಿ, ನಾವು ವಿಧಾನಪರಿಷತ್ನಲ್ಲಿ ಚರ್ಚೆ ಮಾಡಿದ ಕೂಡಲೇ ವಿಧಾನಸಭೆಯಲ್ಲೂ ಡ್ರಗ್ಸ್ ದಂಧೆ ಕುರಿತು ಚರ್ಚೆಯಾಯಿತು. ಅಂದು ಗೃಹ ಸಚಿವರಾಗಿದ್ದ ಪರಮೇಶ್ವರ್, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ವರದಿ ತಯಾರಿಸುವುದಾಗಿ ಹೇಳಿದ್ದರು. ಆದರೆ ಅದು ಬರೀ ಹೇಳಿಕೆಯಲ್ಲೇ ಉಳಿಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಚಿತ್ರೋದ್ಯಮದಲ್ಲಿ ಅವಕಾಶಕ್ಕಾಗಿ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ ಎಂಬ ಕೆಲವು ನಟ-ನಟಿಯರ ಹೇಳಿಕೆಯ ವಿಚಾರಕ್ಕೆ ತಾರ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಇದು ಹೊಸ ವಿಚಾರ, ಈ ರೀತಿ ಆದ ಅನುಭವ ಯಾವುದೂ ಇಲ್ಲ. ಇಂತಹ ಮಾತುಗಳನ್ನು ಕೇಳಿದಾಗ ಬೇಸರವಾಗುತ್ತದೆ, ನನಗೆ ಗೊತ್ತಿರುವ ಹಾಗೆ ಯಾವುದೇ ನಿರ್ಮಾಪಕರು ಕಲಾವಿದರನ್ನು ಬುಕ್ ಮಾಡುವ ವ್ಯವಸ್ಥೆ ಇತಿಹಾಸದಲ್ಲೇ ಇಲ್ಲ. ಹೆಣ್ಣುಮಕ್ಕಳು ಈ ಬಗ್ಗೆ ಹುಷಾರಾಗಿರಿ ಎಂದು ಸಲಹೆ ನೀಡಿದರು.