ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಜಾಲ ನಂಟು ಆರೋಪ ಪ್ರಕರಣ ಸಂಬಂಧ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಸಿಟಿ ಸಿವಿಲ್ ಆವರಣದ ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ನಡೆಯಿತು. ವಾದ ಪ್ರತಿವಾದ ನಡೆದು ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ. ಹಾಗೆ ಇವರ ಜೊತೆ ಆಪ್ತರ ಅರ್ಜಿ ಆದೇಶ ಕೂಡ ಸೋಮವಾರಕ್ಕೆ ಕಾಯ್ದಿರಿಸಲಾಗಿದೆ.
ನ್ಯಾಯಾಲಯದಲ್ಲಿ ಸಿಸಿಬಿ ಪರ ವಕೀಲರು ವಾದ ಮಾಡಿ, ನಟಿ ರಾಗಿಣಿ ಪ್ರಕರಣದ ಎ1 ಆರೋಪಿ ಶಿವಪ್ರಕಾಶ್ ನಿರ್ಮಾಪಕ ಆದರೆ ರವಿಶಂಕರ್ಗೂ ರಾಗಿಣಿ ಪರಿಚಯ ಮಾಡಿಸಿದ್ದೇ ಶಿವಪ್ರಕಾಶ್, ಎಲ್ಲರನ್ನೂ ರವಿಶಂಕರ್ ಹೇಳಿಕೆ ಆಧರಿಸಿ ಆರೋಪಿಗಳನ್ನಾಗಿ ಮಾಡಲಾಗಿದೆ. ಬಾಣಸವಾಡಿ ಕೇಸ್ನಲ್ಲಿ ಸಿಕ್ಕ ಡ್ರಗ್ಸ್ಗೆ ಹಣ ಹೂಡಿಕೆ ಪತ್ತೆ ಹಚ್ಚಲು ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಯಾವುದೇ ಸಾಕ್ಷ್ಯ ಇಲ್ಲದೇ ಆರೋಪಿಗಳನ್ನಾಗಿ ಮಾಡಲಾಗಿಲ್ಲ ಎಂದು ವಾದ ಮಂಡಿಸಿದರು.
ಇದೇ ವೇಳೆ ಆರೋಪಿ ಪರ ವಾದ ಮಂಡಿಸಿದ ವಕೀಲರು, ಪಾರ್ಟಿಗಳಲ್ಲಿ ಗಾಂಜಾ, ಕೊಕೇನ್, ಎಂಡಿಎಂಎ ಸರಬರಾಜು ಮಾಡುತ್ತಿದ್ದರೆಂದು ಆರೋಪಿಸಿದ್ದಾರೆ. ಆದರೆ ಇಷ್ಟೂ ಆರೋಪಿಗಳ ಮೇಲಿನ ಆರೋಪವೇನು ಸ್ಪಷ್ಟಪಡಿಸಿಲ್ಲ. ಆರೋಪಕ್ಕೆ ಪೂರಕ ಸಾಕ್ಷ್ಯವಿಲ್ಲದೇ ಆರೋಪ ಮಾಡಿದ್ದಾರೆ. ಸತ್ಯಗಳನ್ನು ಮರೆಮಾಚಿ ಕೋರ್ಟ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ಹಾಗೆ ರವಿಶಂಕರ್ ಹೇಳಿಕೆ ಆಧರಿಸಿ 12 ಜನರನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ರವಿಶಂಕರ್ನನ್ನೇ ಎ1 ಆರೋಪಿ ಮಾಡಬೇಕಿತ್ತು. ರಾಗಿಣಿ ಸಾಕ್ಷ್ಯ ನಾಶ ಮಾಡುತ್ತಾರೆಂದು ಆರೋಪಿಸಿದ್ದಾರೆ. ಆದರೆ ಸಿಸಿಬಿಯಲ್ಲಿ ಎಸಿಪಿ ಹಂತದ ಅಧಿಕಾರಿಯನ್ನ ನಿನ್ನೆ ಅಮಾನತು ಮಾಡಿದ್ದಾರೆ, ಸಿಸಿಬಿಯಲ್ಲೇ ಸಾಕ್ಷ್ಯ ತಿದ್ದುಪಡಿ ಮಾಡುವವರಿದ್ದಾರೆ. ಹಾಗೆ ರಾಗಿಣಿ ಕೊರೊನಾ ಸಮಯದಲ್ಲೂ ಸಮಾಜ ಸೇವೆ ಮಾಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಜಾಮೀನು ನೀಡಲು ಮನವಿ ಮಾಡಿದರು. ಆದರೆ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.28 ಕ್ಕೆ ಮುಂದೂಡಿಕೆ ಮಾಡಿದೆ.
ಇನ್ನು ಜಾಮೀನು ಕೋರಿ ನಟಿ ಸಂಜನಾ ಸಲ್ಲಿಸಿದ್ದ ಅರ್ಜಿ ಪರ ವಕೀಲ ಶ್ರೀನಿವಾಸ ರಾವ್ ವಾದ ಮಾಡಿ, ಸೆ.3 ರಂದು ರವಿಶಂಕರ್ ಹೇಳಿಕೆ ಪಡೆಯಲಾಗಿದೆ. ಸಂಜನಾ ಮೇಲೆ ಎಫ್ಐಆರ್ ಮಾಡುವ ಮುನ್ನ ಸತ್ಯಾಂಶ ಪರಿಶೀಲಿಸಿಲ್ಲ. ಮೊದಲಿಗೆ ರವಿಶಂಕರ್ ವಿರುದ್ಧದ ಆರೋಪದ ತನಿಖೆ ಮಾಡಬೇಕಿತ್ತು. ಆತ ಹೆಸರಿಸಿದ ವ್ಯಕ್ತಿಗಳ ವಿರುದ್ಧ ಸಾಕ್ಷಿಗಳಿವೆಯೇ ಎಂದು ಸ್ವತಂತ್ರವಾಗಿ ಪರಿಶೀಲಿಸಬೇಕಿತ್ತು, ಆದರೆ ಪರಿಶೀಲನೆ ಮಾಡದೇ ಬಂಧಿಸಿದ್ದಾರೆಂದು ನ್ಯಾಯಾಲಯಕ್ಕೆ ತಿಳಿಸಿ ಜಾಮೀನು ನೀಡುವಂತೆ ಮನವಿ ಮಾಡಿದರು. ಆದರೆ ನ್ಯಾಯಾಲಯ ಅರ್ಜಿಯನ್ನ ಸೆ.28ಕ್ಕೆ ಮುಂದೂಡಿದೆ.
ಸಿಸಿಬಿ ಪರ ವಕೀಲರು ವಾದ ಮಾಡಿ ಎ1 ಆರೋಪಿ ಶಿವಪ್ರಕಾಶ್ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಬೇಕು, ಹಾಗೆ ತಲೆಮರೆಸಿಕೊಂಡಿರುವ ಆದಿತ್ಯಾ ಆಳ್ವಾ ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ ಇವರಿಗೆ ನೀರಿಕ್ಷಣಾ ಜಾಮೀನು ನೀಡದಂತೆ ಮನವಿ ಮಾಡಿದರು.
ಆರೋಪಿಗಳ ಪರ ವಕೀಲರು ವಾದ ಮಾಡಿ ಶಿವಪ್ರಕಾಶ್ ತಲೆಮರೆಸಿಕೊಂಡಿಲ್ಲ ನಿರೀಕ್ಷಣಾ ಜಾಮೀನು ನೀಡಿದರೆ ಹಾಜರಾಗುತ್ತಾನೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದರು. ಇದರ ಜೊತೆ ವಿನಯ್ ಕುಮಾರ್, ರಾಹುಲ್ ವಾದ ಕೂಡ ನಡೆದಿದ್ದು ಜಾಮೀನು ಅರ್ಜಿ ಆದೇಶ ಸೆ.28ಕ್ಕೆ ಕಾಯ್ದಿರಿಸಲಾಗಿದೆ.
ಸದ್ಯ ಡ್ರಗ್ ಜಾಲದಲ್ಲಿ ಸಿಲುಕಿದ ಆರೋಪಿಗಳು ಇಂದು ಜಾಮೀನು ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಮತ್ತೆ ಸೋಮವಾರದ ವರೆಗೆ ಸೆರೆಮನೆ ವಾಸ ಅನುಭವಿಸುವುದು ಅನಿವಾರ್ಯವಾಗಿದೆ.