ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ಪೃಥ್ವಿರಾಜ್ ಸುಕುಮಾರನ್, ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಅವರು ಇದೀಗ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಭಾಗವಾಗಿದ್ದಾರೆ. ಹೇಗೆ ಎಂಬ ಪ್ರಶ್ನೆ ಬರಬಹುದು. ಕೆಜಿಎಫ್ 2 ಚಿತ್ರವು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದ್ದು, ಅಲ್ಲಿ ಚಿತ್ರವನ್ನು ಅರ್ಪಿಸುವುದರ ಜೊತೆಗೆ, ಚಿತ್ರದ ಬಿಡುಗಡೆ ಉಸ್ತುವಾರಿ ಅವರು ನೋಡಿಕೊಳ್ಳುತ್ತಿದ್ದಾರೆ.
ಈ ವಿಷಯವನ್ನು ಸ್ವತಃ ಪೃಥ್ವಿರಾಜ್ ಅವರೇ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಹೇಳಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಅವರು, ನಾನು ಲೂಸಿಫರ್ ಚಿತ್ರ ಮಾಡಿದ ಸಂದರ್ಭದಲ್ಲಿ ಹೊಂಬಾಳೆ ಫಿಲಂಸ್‍ನವರು ನನ್ನನ್ನು ಭೇಟಿ ಮಾಡಿ, ಜೊತೆಯಾಗಿ ಕೆಲಸ ಮಾಡುವ ಆಫರ್ ಕೊಟ್ಟರು. ಹೊಂಬಾಳೆ ಫಿಲಂಸ್ ಜೊತೆಗೆ ಕೈಜೋಡಿಸುವುದು ಹೆಮ್ಮೆಯ ವಿಷಯವಾಗಿದ್ದು, ದೇಶವೇ ಎದುರು ನೋಡುತ್ತಿರುವ ಕೆಜಿಎಫ್ 2 ಚಿತ್ರವನ್ನು ಮಲಯಾಳಂನಲ್ಲಿ ಅರ್ಪಿಸುವುದಕ್ಕೆ ಹೆಮ್ಮೆಯಾಗುತ್ತಿದೆ. ಮಲಯಾಳಂನಲ್ಲಿ ನನ್ನ ಪೃಥ್ವಿರಾಜ್ ಪ್ರೊಡಕ್ಷನ್ಸ್ ಸಂಸ್ಥೆಯು ಅರ್ಪಿಸುತ್ತಿದೆ. ಕೋಟ್ಯಂತರ ಜನರ ತರಹ ನಾನು ಸಹ ಚಿತ್ರದ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಓದಿ: ರಾಕಿ ಭಾಯ್ ಎಂಟ್ರಿಗೆ ಡೇಟ್ ಫಿಕ್ಸ್.. ಹಳೆ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರಚಾರ..
ಕೆಜಿಎಫ್ 2 ಚಿತ್ರವನ್ನು ಕನ್ನಡದಲ್ಲಿ ಕೆಆರ್ಜೆ ಸ್ಟುಡಿಯೋಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿದೆ. ಹಿಂದಿಯಲ್ಲಿ ಫರ್ಹಾನ್ ಅಖ್ತರ್ ಮತ್ತು ಅನಿಥ್ ಥಡಾನಿ ಜೊತೆಯಾಗಿ ಬಿಡುಗಡೆ ಮಾಡುತ್ತಿದ್ದಾರೆ. ತಮಿಳಿನಲ್ಲಿ ವಿಶಾಲ್ ಫಿಲ್ಮ್ ಫ್ಯಾಕ್ಟರಿ, ತೆಲುಗಿನಲ್ಲಿ ವರಾಹಿ ಚಿತ್ರ ಸಂಸ್ಥೆಗಳು ಬಿಡುಗಡೆ ಮಾಡುತ್ತಿದ್ದು, ಇದೀಗ ಮಲಯಾಳಂನಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್ ಸಂಸ್ಥೆಯು ಚಿತ್ರ ಬಿಡುಗಡೆಗೆ ಮುಂದಾಗಿದೆ.
ಪ್ಯಾಚ್‍ವರ್ಕ್ ಹೊರತು ಪಡಿಸಿದರೆ, ಕಜಿಎಫ್ 2 ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಯಶ್ ಅವರ ಹುಟ್ಟುಹಬ್ಬದ ದಿನವಾದ ಜನವರಿ 8 ರಂದು ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್ ಬಿಡುಗಡೆ ಕುರಿತು ಸಾಕಷ್ಟು ಪ್ರಚಾರ ಮಾಡಲಾಗಿದ್ದು, ಯಶ್ ಅವರ ಅಭಿಮಾನಿಗಳು ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.