ಬೆಂಗಳೂರು : ನಟ ದರ್ಶನ್ ಹೆಸರಲ್ಲಿ ವಂಚನೆ ನಡೆಸಿರುವ ಪ್ರಕರಣದ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದು, ಜೂನ್ 17ರಂದು ನಿರ್ಮಾಪಕ ಉಮಾಪತಿ ಬಂದು ಜಯನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಭೂ ದಾಖಲಾತಿಗಳ ಶ್ಯೂರಿಟಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರಿಗೆ ತಿಳಿಸಿ, ದೂರು ಅರ್ಜಿಯನ್ನು ವಜಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಲೋನ್ ಅರ್ಜಿ, ಶ್ಯೂರಿಟಿ ವಿಚಾರ ಯಾವುದೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬ್ಯಾಂಕ್ನವರು ಕೂಡ ಯಾರೂ ನಮ್ಮನ್ನು ಅಪ್ರೋಚ್ ಮಾಡಿಲ್ಲ. ಸೌತ್ ಎಂಡ್ ಸರ್ಕಲ್ ಕೆನರಾ ಬ್ಯಾಂಕ್ನಿಂದ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಡಿಸಿಪಿ ಹರೀಶ್ ಪಾಂಡೆ ಹೇಳಿದ್ದಾರೆ.
ಭಾನುವಾರ ದೂರು ವಾಪಸ್ : ಜೂನ್ 17ರಂದು ಉಮಾಪತಿ ಅವರು ನೀಡಿದ್ದ ದೂರನ್ನ ಪರಿಶೀಲಿಸಿದ ಜಯನಗರ ಠಾಣೆ ಪೊಲೀಸರು, ಭಾನುವಾರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದರು. ಮೈಸೂರಿನಲ್ಲೇ ದೂರು ನೀಡುವುದಾಗಿ ಉಮಾಪತಿ ಪೊಲೀಸರಿಗೆ ತಿಳಿಸಿದ್ದರು. ಬಳಿಕ ಜಯನಗರ ಪೊಲೀಸರು ಅರ್ಜಿ ವಜಾ ಮಾಡಿರುವುದಾಗಿ ನಿನ್ನೆ ಮಾಹಿತಿ ನೀಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ನಟ ದರ್ಶನ್ ಬ್ಯಾಂಕ್ ಸಾಲಕ್ಕಾಗಿ ಶ್ಯೂರಿಟಿ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ನಿರ್ಮಾಪ ಉಮಾಪತಿಯವರಿಗೆ ಫೋನ್ ಮಾಡಿ ಹೇಳಿದ್ದರು. ಈ ಬಗ್ಗೆ ಅನುಮಾನ ಬಂದ ಹಿನ್ನೆಲೆ ವಿಚಾರಣೆ ನಡೆಸುವಂತೆ ನಿರ್ಮಾಪಕ ಉಮಾಪತಿ ಜಯನಗರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಜಯನಗರ ಪೊಲೀಸರು (ಗಂಭೀರ ಸ್ವರೂಪವಲ್ಲದ) ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆ ದೂರು ವಜಾಗೊಂಡಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.
ಉಮಾಪತಿ ಏನಂದ್ರು?: ಅರುಣ್ ಕುಮಾರಿ ಎಂಬ ಮಹಿಳೆ ನನಗೆ ಕರೆ ಮಾಡಿ, ಕೆನರಾ ಬ್ಯಾಂಕ್ ಲೋನ್ ಸೆಕ್ಷನ್‌ನಿಂದ ಮಾತಾಡುತ್ತಿದ್ದೇನೆ. ನಟ ದರ್ಶನ್ ಪರಿಚಿತರೊಬ್ಬರಿಗೆ ಸಾಲಕ್ಕೆ ಶ್ಯೂರಿಟಿ ಹಾಕಿದ್ದಾರೆ. ಈ ಬಗ್ಗೆ ದಾಖಲೆಗಳ ಬಗ್ಗೆ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದರು.
ಆ ಮಹಿಳೆಗೆ ನಾನು ನನ್ನ ಕಚೇರಿಗೆ ಬಂದು ಮಾತನಾಡುವಂತೆ ಹೇಳಿದ್ದೆ. ಕಚೇರಿಗೆ ಬಂದಿದ್ದ ಮಹಿಳೆ, ಕೆಲ ದಾಖಲೆಗಳನ್ನು ತೋರಿಸಿ ನಟ ದರ್ಶನ್ ಪರಿಚಿತರೊಬ್ಬರಿಗೆ ಸಾಲಕ್ಕೆ ಶ್ಯೂರಿಟಿ ಹಾಕಿದ್ದಾರೆ. ಈ ಬಗ್ಗೆ ಅವರೇ ಸಹಿ ಹಾಕಿದ್ದಾರೆ ಎಂದಿದ್ದರು. ಬಳಿಕ ಮಹಿಳೆ ಇದೇ ರೀತಿಯಲ್ಲಿ ಹಲವರಿಗೆ ಕರೆ ಮಾಡಿರುವುದು ಗೊತ್ತಾಗಿತ್ತು.
ಓದಿ : ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ: ಘಟನೆಯ ಸಂಪೂರ್ಣ ಮಾಹಿತಿ
ಮಹಿಳೆ ಮೇಲೆ ಅನುಮಾನ ಬಂದ ಹಿನ್ನೆಲೆ ಆಕೆಯನ್ನು ವಿಚಾರಣೆ ನಡೆಸುವಂತೆ ನಾನು ಜಯನಗರ ಠಾಣೆಗೆ ದೂರು ನೀಡಿದ್ದೆ. ದೂರಿನ ಅರ್ಜಿ ಪಡೆದು ಎನ್‌ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದರು ಎಂದು ಉಮಾಪತಿ ಹೇಳಿದ್ದಾರೆ.