ಬೆಂಗಳೂರು: ಕೊರೊನಾ ತಡೆಗಟ್ಟಲು ಹೇರಲಾದ ಲಾಕ್ಡೌನ್ ಸದ್ಯ ರಿಲೀಫ್ ಆಗಿದ್ದು, ನಗರದಲ್ಲಿ ರೌಡಿ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿವೆ. ಹೀಗಾಗಿ ಹೊಸದಾಗಿ ಬಂದ ನಗರ ಪೊಲೀಸ್ ಆಯುಕ್ತರು ರೌಡಿಗಳನ್ನು ಮಟ್ಟ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರದಲ್ಲಿ ಅಪರಾಧಗಳನ್ನ ತಡೆಗಟ್ಟಲು ಪೊಲೀಸರು ಮುಂದಾಗಿದ್ದು, ಇಂದು ಉತ್ತರ ವಿಭಾಗದ ಯಶವಂತಪುರ ಠಾಣೆಯಲ್ಲಿ ರೌಡಿ ಪರೇಡ್ ನಡೆಸಲಾಯ್ತು.
ಯಶವಂತಪುರ ಉಪವಿಭಾಗದ ಎಸಿಪಿ ಶ್ರೀನಿವಾಸ್ ರೆಡ್ಡಿ ನೇತೃತ್ವದ ತಂಡ ಒಟ್ಟು 21 ಆರೋಪಿಗಳಿಗೆ ಚಳಿ ಬಿಡಿಸಿದ್ದಾರೆ. ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಕೊಲೆ, ಕೊಲೆಯತ್ನ, ರಾಬರಿ, ಡಕಾಯಿತಿ ಹೀಗೆ ಬೇರೆ ಬೇರೆ ಅಪರಾಧ ಪ್ರಕರಣದಲ್ಲಿ 63 ಜನ ಭಾಗಿಯಾಗಿದ್ದರು. ಸದ್ಯ 63 ಜನರಲ್ಲಿ 23 ಜನರನ್ನ ಇಂದು ಠಾಣೆಗೆ ಕರೆಸಿದ್ದಾರೆ. ಅಲ್ಲದೇ 17 ಜನ ಜೈಲಿನಲ್ಲಿದ್ದು, 5 ಜನ ತಲೆಮರೆಸಿಕೊಂಡಿದ್ದಾರೆ. ಇನ್ನುಳಿದ 5 ಜನರು ಕೊರೊನಾ ಸೋಂಕಿನ ಕಾರಣ ನೀಡಿ ಇಂದು ರೌಡಿ ಪರೇಡ್ಗೆ ಹಾಜರಾಗಿಲ್ಲ.
ಸದ್ಯ ಇಂದು ಹಾಜರಾಗಿದ್ದ 21ಮಂದಿ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡ ಎಸಿಪಿ ಕೂದಲು, ಗಡ್ಡ ಬಿಟ್ಟುಕೊಂಡಿದ್ದೀರಾ ಏನಿದು ಹೀರೋ ಅನ್ನೋ ಭ್ರಮೆನಾ. ಫೇಮಸ್ ಆಗೋಕೆ ಮತ್ತೆ ಹೊರಟಿದ್ದಿರಾ.. ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾದರೆ ಅಷ್ಟೇ ಮತ್ತೆ ಕಂಬಿ ಎಣಿಸಬೇಕು. ಒಳ್ಳೇ ರೀತಿ ಜೀವನ ಮಾಡಿದರೆ ಒಳ್ಳೆಯದು, ರೌಡಿ ಕೆಲಸ ಮಾಡಿರೋದು ದೇಶ ಸೇವೆ ಮಾಡಿದ ಹಾಗೆ ಎಂಬ ಭ್ರಮೆ ಬೇಡ. ಒಂದು ವೇಳೆ ಬಾಲಬಿಚ್ಚಿದ್ರೆ ಬಾಲ ಕತ್ತರಿಸಿ ಹಾಕ್ತಿನಿ ಎಂದು ಎಚ್ಚರಿಕೆ ನೀಡಿದ್ದಾರೆ.