ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಒಂದನೇ ಎಸಿಎಂಎಂ ನ್ಯಾಯಾಲಯ ತಿರಸ್ಕರಿಸಿದೆ. ಪಿಎಸ್ಐ ಹುದ್ದೆಯ ಆಕಾಂಕ್ಷಿಗಳಾದ ಎಸ್.ಜಾಗೃತ್, ಆರ್. ಮಧು, ಮಧ್ಯವರ್ತಿಗಳಾದ ಸಿ.ಎನ್.ಶಶಿಧರ ಮತ್ತು ಶರತ್‌ಕುಮಾರ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಾಧೀಶರಾದ ಆನಂದ ಟಿ ಚೌಹಾಣ್ ಆದೇಶಿಸಿದರು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ವಕೀಲ ಪಿ.ಪ್ರಸನ್ನಕುಮಾರ್, 55 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿದ ಆರೋಪ ಇದೆ. ಪೊಲೀಸ್ ಇಲಾಖೆಯಲ್ಲೇ ಈ ರೀತಿ ನಡೆದರೆ ನಾಳೆ ಇಂತಹವರು ಹುದ್ದೆಗಳನ್ನು ಅಲಂಕರಿಸಿದ ಮೇಲೆ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಅಷ್ಟೇ ಅಲ್ಲ ತನಿಖೆಯೂ ಬಾಕಿ ಇದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.
ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ದಾಖಲಾಗಿದ್ದ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಾಸಿಕ್ಯೂಷನ್ ಮನವಿಯನ್ನು ಪುರಸ್ಕರಿಸಿದ್ದಾರೆ. ಗಂಭೀರವಾದ ಈ ಪ್ರಕರಣದಲ್ಲಿ ನಾಲ್ವರ ಅರ್ಜಿಗಳನ್ನೂ ತಿರಸ್ಕರಿಸಲಾಗಿದೆ ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿ : ಪರಿಷತ್ ಕಲಾಪ: ರಾಜ್ಯದ ಮಳೆಹಾನಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಂದ ನಿಲುವಳಿ ಸೂಚನೆ ಮಂಡನೆ