ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನನ್ನು ಅಪಹರಿಸಿ ಆಸ್ತಿ ಪತ್ರ ಬರೆಯಿಸಿಕೊಂಡು ಜೀವ ಬೆದರಿಕೆ ಹಾಕಿದ್ದ ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 87 ವರ್ಷದ ರಾಘವ ರಾವ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಭು ಎಂಬಾತ ಸೇರಿದಂತೆ ಐವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಜ್ಞಾನಭಾರತಿ ರೈಲ್ವೇ ಕಾಲೋನಿಯಲ್ಲಿ ವಾಸವಾಗಿದ್ದ ರಾಘವ್ ರಾವ್ ಅವರ ಇಬ್ಬರೂ ಮಕ್ಕಳೂ ಮೈಸೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನಲ್ಲಿ ರಾಘವ್ ಅವರಿಗೆ ಸ್ವಂತ ಮನೆಯಿದೆ. ಆ ಮನೆಯಲ್ಲಿ ರಾಘವ್ ಒಬ್ಬರೇ ವಾಸವಿದ್ದರು. ಪ್ರತಿ ತಿಂಗಳು ಬರುತ್ತಿದ್ದ ಪಿಂಚಣಿ ಹಣದಿಂದ ರಾಘವ್ ಜೀವನ ನಡೆಯುತ್ತಿತ್ತು.
ಈ ಒಂಟಿ ವೃದ್ಧನನ್ನು ಗುರಿಯಾಗಿಸಿಕೊಂಡು ಪ್ರಭು ಸೇರಿದಂತೆ ಐವರು ದುಷ್ಕರ್ಮಿಗಳು ಏ.16 ರಂದು ಮನೆಗೆ ನುಗ್ಗಿ ಬೆದರಿಸಿ ಬೀರು ಒಡೆದು ಮನೆ, ಆಸ್ತಿ ಪತ್ರ ಕಸಿದುಕೊಂಡಿದ್ದಾರೆ. ಬಳಿಕ ಕಿಡ್ನ್ಯಾಪ್ ಮಾಡಿ ನಗರದೆಲ್ಲೆಡೆ ಓಡಾಡಿಸಿದ್ದಾರೆ. ಹಗಲಿನಲ್ಲಿ ವೃದ್ಧನನ್ನು ವೃದ್ದಾಶ್ರಮದಲ್ಲಿಟ್ಟು ರಾತ್ರಿ ಸುತ್ತಾಟ ನಡೆಸಿದ್ದಾರೆ.
ರಾಘವ್ ಬ್ಯಾಂಕ್ ಖಾತೆಯಿಂದ 20 ಸಾವಿರ ರೂ ಡ್ರಾ ಮಾಡಿದ್ದಾರೆ. ಬಳಿಕ ಮೂರು ದಿನಗಳ ಬಳಿಕ ಅಂದರೆ ಏ.19ರಂದು ರಾಜಾಜಿನಗರದ ವೃದ್ಧಾಶ್ರಮಕ್ಕೆ ಶಿಫ್ಟ್ ಮಾಡಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವೃದ್ಧನ ಆಸ್ತಿಯನ್ನು ಆರೋಪಿಗಳು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 3 ತಿಂಗಳು ವೃದ್ಧನನ್ನು ಬೇರೆ- ಬೇರೆ ವೃದ್ದಾಶ್ರಮದಲ್ಲಿ ಇಟ್ಟಿದ್ದಾರೆ. ಬ್ಯಾಂಕ್ನಲ್ಲಿದ್ದ ಹಣವನ್ನು ಆಗಾಗ ಡ್ರಾ ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಕಾರಣ ವೃದ್ಧ ರಾಘವ್ ಅವರನ್ನು ನೋಡಲು ಮೈಸೂರಿನಲ್ಲಿದ್ದ ಮಗಳು ಬಂದಿರಲಿಲ್ಲ. ನಂತರ ಜುಲೈನಲ್ಲಿ ಮಗಳು ಮನೆಗೆ ಬಂದಾಗ ಅಪ್ಪ ಕಾಣೆಯಾಗಿರುವುದು ಗೊತ್ತಾಗಿದೆ. ಎಲ್ಲಾ ಕಡೆ ಹುಡುಕಾಟ ನಡೆಸಿ ಜುಲೈ 5 ರಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತು ಘಟನೆ ಹೇಳದಂತೆ ಆರೋಪಿಗಳು ಬೆದರಿಸಿ ಬಿಟ್ಟಿದ್ದಾರೆ.
ಜು. 8 ರಂದು ರಾಘವ್ ನಡೆದ ಘಟನೆ ಬಗ್ಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.