ಬೆಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಬೆಂಗಳೂರಿನ ನ್ಯಾಯಾಲಯ 20 ವರ್ಷ ಜೈಲು ಹಾಗೂ 3 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಕಿರಣ್ ಕುಮಾರ್ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಇಶ್ರತ್ ಜಹಾನ್ ಆರಾ ಶಿಕ್ಷೆ ವಿಧಿಸಿದ್ದಾರೆ.
ಕಿರಣ್ ಕುಮಾರ್ಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಪರಾಧಕ್ಕೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಹಾಗೆಯೇ, ಸೆಕ್ಷನ್ 506 ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ. ಇನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ಗಳಾದ 5(1), 6 ರ ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.
ದಂಡದ ಮೊತ್ತಗಳನ್ನು ಪಾವತಿಸದಿದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರಕರಣದಲ್ಲಿ ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ ಹಾಗೂ ಗೊರವರ ಗೀತಾ ರಾಮಕೃಷ್ಣ ವಾದ ಮಂಡಿಸಿದ್ದರು. 2014ರ ಅಕ್ಟೋಬರ್ 30ರಂದು ಕಿರಣ್ ಕುಮಾರ್ ಪರಿಚಯದ ಬಾಲಕಿಯನ್ನು ನಂಬಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಈ ಸಂಬಂಧ ಮಡಿವಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. 6 ವರ್ಷಗಳ ಕಾಲ ವಿಚಾರಣೆ ನಡೆಸಿದ ಸಿಸಿಹೆಚ್ 55 ಮತ್ತು ಎಫ್ಟಿಸಿ 3ನೇ ನ್ಯಾಯಾಲಯ ಮಾರ್ಚ್ 28ರಂದು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ನಡುವೆ ಆರೋಪಿ ಕಾನೂನು ಚೌಕಟ್ಟಿನಿಂದ ಪಾರಾಗಲು ಸಂತ್ರಸ್ತೆಯೊಂದಿಗೆ ಮದುವೆ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದ್ದ.
ಇದನ್ನೂ ಓದಿ: ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಲಕ್ಷ್ಮೀಶ್ ಮನೆಯಲ್ಲಿ ಎಸಿಬಿ ಶೋಧ