ಬೆಂಗಳೂರು: ಗೋಕಾಕ್ ಉಪಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉ್ಲಂಸಿಘಿಸಿದ ಆರೋಪದಡಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಖುದ್ದು ವಿಚಾರಣೆಗೆ ಹಾಜರಾಗುವಂತೆ ಗೋಕಾಕ್ ಜೆಎಂಎಫ್ ಸಿ ಕೋರ್ಟ್ ಜಾರಿ ಮಾಡಿದ್ದ ಸಮನ್ಸ್ ಸೇರಿದಂತೆ ಇಡೀ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಪ್ರಕರಣದಲ್ಲಿ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿದ್ದ ಗೋಕಾಕ್ ಜೆಎಂಎಫ್ಸಿ ನ್ಯಾಯಾಲಯ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ರದ್ದುಪಡಿಸಲು ಕೋರಿ ಬಿ.ಎಸ್. ಯಡಿಯೂರಪ್ಪ ಅವರು ಹೈಕೋರ್ಟ್ ನ ಧಾರವಾಡ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಪ್ರಕಟಿಸಿದ್ದು, ಇಡೀ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಕೋರ್ಟ್ ತನ್ನ ತೀರ್ಪಿನಲ್ಲಿ, ಅರ್ಜಿದಾರರ ವಿರುದ್ಧ ನೀಡಿರುವ ದೂರಿನಲ್ಲಿ ಆರೋಪ ಸಾಬೀತು ಪಡಿಸುವಂತಹ ಯಾವುದೇ ಅಂಶಗಳಿಲ್ಲ. ಹಾಗೆಯೇ, ಪ್ರಕರಣದ ತನಿಖೆಗೆ ಆದೇಶಿಸುವಾಗ ಹಾಗೂ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ತಿರಸ್ಕರಿಸುವಾಗ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಹೀಗಾಗಿ, ಜೆಎಂಎಫ್ ಸಿ ನ್ಯಾಯಾಲಯದ ವಿಚಾರಣೆ ಹಾಗೂ ಸಮನ್ಸ್ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದೆ.
ವಿಚಾರಣೆ ರದ್ದುಪಡಿಸಿದ್ದೇಕೆ : ವಿಚಾರಣೆ ವೇಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪರ ವಾದಿಸಿದ್ದ ಹಿರಿಯ ವಕೀಲ ಸಿ. ವಿ. ನಾಗೇಶ್ ಅವರು, ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಹಾಗಿದ್ದೂ, ಬಿ ವರದಿ ತಿರಸ್ಕರಿಸಿರುವ ನ್ಯಾಯಾಲಯ, ಸಂಜ್ಞೇಯ ಅಪರಾಧ ಎಂದು ಪರಿಗಣಿಸಿ ಆರ್ಜಿದಾರರಿಗೆ ಸಮನ್ಸ್ ಜಾರಿ ಮಾಡಿದೆ. ತನಿಖಾಧಿಕಾರಿ ಸಲ್ಲಿಸುವ ಬಿ ರಿಪೋರ್ಟ್ ತಿರಸ್ಕರಿಸುವಂತಿದ್ದರೆ ನ್ಯಾಯಾಲಯ ದೂರುದಾರರಿಗೆ ನೋಟಿಸ್ ನೀಡಿ, ಅವರ ಹೇಳಿಕೆ ದಾಖಲಿಸಿಕೊಳ್ಳಬೇಕಿತ್ತು. ಯಾವ ಕಾರಣಕ್ಕೆ ವರದಿ ತಿರಸ್ಕರಿಸಲಾಗುತ್ತಿದೆ ಎಂಬುದನ್ನು ದಾಖಲಿಸಿಕೊಂಡು ಮುಂದಿನ ಪ್ರಕ್ರಿಯೆ ಜರುಹಿಸಬೇಕಿತ್ತು. ಆದರೆ, ವಿಚಾರಣಾ ನ್ಯಾಯಾಲಯ ಈ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು. ಇದೇ ಆಧಾರದಲ್ಲಿ ಹೈಕೋರ್ಟ್ ಪ್ರಕರಣ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ : 2019ರ ನವೆಂಬರ್ 23ರಂದು ಗೋಕಾಕ್ ಉಪ ಚುನಾವಣೆ ಪ್ರಚಾರದ ವೇಳೆ ಬಿಎಸ್ ವೈ, ಲಿಂಗಾಯತ ಮತಗಳು ಚದುರಿ ಹೋಗದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಹೀಗೆ ಹೇಳುವ ಮೂಲಕ ವೀರಶೈವ ಲಿಂಗಾಯತ ಸಮಾಜದ ಹೆಸರಿನಲ್ಲಿ ಮತ ಯಾಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ದೂರುದಾರರು, ಬಿಎಸ್ ವೈ ನೀತಿ ಸಂಹಿತೆ ಉ್ಲಂಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನ.26ರಂದು ದೂರು ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ವರದಿ ತಿರಸ್ಕರಿಸಿದ್ದ ನ್ಯಾಯಾಲಯ, ಸೆ.1ರಂದು ಖುದ್ದು ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ನಡುವೆ ಸಮನ್ಸ್ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಆಗಸ್ಟ್ 27ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಸಮನ್ಸ್‌ಗೆ ತಡೆಯಾಜ್ಞೆ ನೀಡಿತ್ತು.