ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದ ಗಂಡನನ್ನು ಒಂದು ಮಾಡುವುದಾಗಿ ನಂಬಿಸಿ 8 ಲಕ್ಷ ಹಣ ಪಡೆದು ಸರ್ಕಾರಿ ಮಹಿಳಾ ನೌಕರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀಪಾಂಜಲಿ ನಗರದ ಫಾತಿಮಾ ಎಂಬವರು ನೀಡಿದ ದೂರಿನ ಮೇರೆಗೆ ನಾಗಮಂಗಲ ಮೂಲದ ನೂರ್ ಮೊಹಮ್ಮದ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಂಚನೆ ಪ್ರಕರಣದಡಿ ನೂರ್ ಮೊಹಮ್ಮದ್ನನ್ನು ತುಮಕೂರಿನ ಶಿರಾ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆಗೊಳಪಡಿಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫಾತಿಮಾ ದೂರಿನ ವಿವರ: ಫಾತಿಮಾ ಅವರು ನೀರಾವರಿ ಇಲಾಖೆಯಲ್ಲಿ ಪ್ರಥಮ ದರ್ಜೆ ಅಧಿಕಾರಿಯಾಗಿ (ಎಫ್ಡಿಐ) ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮೂರು ವರ್ಷದ ಮಗಳಿಗೆ ರಸ್ತೆ ಅಪಘಾತವೊಂದರಲ್ಲಿ ಎಡಗೈಗೆ ಗಾಯವಾಗಿತ್ತು. ಹಲವು ಆಸ್ಪತ್ರೆಗಳಲ್ಲಿ ತೋರಿಸಿದರೂ ಪ್ರಯೋಜನವಾಗಿರಲಿಲ್ಲ. ಪರಿಚಯಸ್ಥರ ಮೂಲಕ ನಾಗಮಂಗಲದಲ್ಲಿದ್ದ ನೂರ್ ಮೊಹಮ್ಮದ್ ಬಳಿಗೆ ಹೋಗಿ ಮಗಳಿಗೆ ನಾಟಿ ಔಷಧಿ ಕೊಡಿಸಿದ್ದರು. ಅದೃಷ್ಟವಶಾತ್ ಕೆಲವೇ ದಿನಗಳಲ್ಲಿ ಗಾಯ ಗುಣವಾಗಿತ್ತು. ಆಗಿನಿಂದಲೂ ನೂರ್ ಮೊಹಮ್ಮದ್ ಮೇಲೆ ಪಾತಿಮಾ ನಂಬಿಕೆ ಇಟ್ಟಿದ್ದರು.
ಪಾತಿಮಾ ತಮ್ಮ ವೈಯಕ್ತಿಕ ವಿಚಾರಗಳನ್ನು ನೂರ್ ಮೊಹಮ್ಮದ್ ಬಳಿ ಹೇಳಿಕೊಂಡಿದ್ದರು. ಅನೇಕ ಕಾರಣಗಳಿಂದ ಗಂಡ ನನ್ನ ಬಿಟ್ಟು ದೂರವಾಗಿದ್ದಾರೆ. ನಮ್ಮಿಬ್ಬರನ್ನು ಒಂದು ಮಾಡುವಂತೆ ನೂರ್ ಮೊಹಮ್ಮದ್ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಸಮ್ಮತಿಸಿದ್ದ ನೂರ್ ಆಕೆಯಿಂದ 1 ಲಕ್ಷ ರೂಪಾಯಿ ಪಡೆದಿದ್ದ. ಕೆಲದಿನಗಳ ಬಳಿಕ ವೈಯಕ್ತಿಕ ಸಮಸ್ಯೆಯಿದ್ದು ತಮ್ಮಹೆಸರಿನಲ್ಲಿ ಲೋನ್ ತೆಗೆಸಿ ಕೊಡುವಂತೆ ಕೇಳಿಕೊಂಡಿದ್ದ. ಅದರಂತೆ ಪಾತಿಮಾ ಎಸ್ಐಬಿ ಬ್ಯಾಂಕ್ನಿಂದ ಎರಡು ತಿಂಗಳ ಹಿಂದೆ ತಮ್ಮ ಹೆಸರಿನಲ್ಲಿ 7 ಲಕ್ಷ ಲೋನ್ ತೆಗೆದು ನೀಡಿದ್ದರು. ನೂರ್ ಮೊಹಮ್ಮದ್ ಮೊದಲ ತಿಂಗಳು ಇಎಂಐ ಪಾವತಿಸಿದ್ದು, ತರುವಾಯ ಹಣ ಕಟ್ಟಲು ಸಾಧ್ಯವಾಗುವುದಿಲ್ಲ ಎಂದು ಉಲ್ಟಾ ಹೊಡೆದು ವಂಚಿಸಿದ್ದಾನೆ.
ಇದನ್ನೂ ಓದಿ: ಕಲಬುರಗಿ: ರಸ್ತೆ ಬದಿ ವಾಹನ ರಿಪೇರಿ ಮಾಡುತ್ತಿದ್ದಾಗ ಹಿಂದಿನಿಂದ ಟ್ಯಾಂಕರ್ ಡಿಕ್ಕಿ; ಮೂವರು ಸಾವು