ಬೆಂಗಳೂರು : ಮದ್ಯದ ಅಮಲಿನಲ್ಲಿ ಸಾಯಿಸುವ ಮಾತನಾಡಿದ ಎಂಬ ಕಾರಣಕ್ಕೆ ಆತನ ಸ್ನೇಹಿತರೇ ಸಂಚು ರೂಪಿಸಿ ಹತ್ಯೆ ಮಾಡಿದ್ದ ಪ್ರಕರಣ ಭೇದಿಸುವಲ್ಲಿ ಸೋಲದೇವನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಶ್ರೀಧರ್ (34) ಎಂಬಾತನನ್ನ ಕೊಚ್ಚಿ ಕೊಲೆ ಮಾಡಿ ಆತನ ಶವಕ್ಕೆ ಬೆಂಕಿಯಿಟ್ಟಿದ್ದ ಪ್ರಕರಣದ ಆರೋಪಿಗಳಾದ ಆಂಧ್ರಪ್ರದೇಶ ಮೂಲದ ವೀರಾಂಜನೇಯಲು, ಗೋವರ್ಧನ್ ಹಾಗೂ ಬುಡ್ಡಪ್ಪ ಎಂಬಾತನನ್ನ ಬಂಧಿಸಲಾಗಿದೆ. ಫೆಬ್ರವರಿ 4ರಂದು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಸುಟ್ಟ ಸ್ಥಿತಿಯಲ್ಲಿ ಶ್ರೀಧರ್ ಶವ ಪತ್ತೆಯಾಗಿತ್ತು.
ಸಾಯಿಸ್ತೀನಿ ಅಂದವನೇ ಶವವಾದ : ಯಲಹಂಕದಲ್ಲಿ ವಾಸವಿದ್ದ ಶ್ರೀಧರ್ ಫಿಸಿಯೋ ಥೆರಪಿಸ್ಟ್ ಆಗಿದ್ದವನು. ಮದ್ಯಪಾನದ ಚಟದಿಂದ ಬಾರ್ನಲ್ಲಿ ವೀರಾಂಜನೇಯಲುನ ಪರಿಚಯವಾಗಿತ್ತು. ಮದ್ಯದ ಅಮಲಿನಲ್ಲಿ ಶ್ರೀಧರ್ ಒಮ್ಮೆ ವೀರಾಂಜನೇಯಲುಗೆ 'ನಿನ್ನ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿಬಿಡ್ತೀನಿ' ಎಂದಿದ್ದ. ಇಬ್ಬರ ನಡುವೆ ಗಲಾಟೆ ನಡೆದು ಒಂದು ತಿಂಗಳು ಕಳೆಯುವಷ್ಟರಲ್ಲಿ ಪಕ್ಕಾ ಸಂಚು ರೂಪಿಸಿದ್ದ ವೀರಾಂಜನೇಯ ತನ್ನ ಸ್ನೇಹಿತರಾದ ಗೋವರ್ಧನ್, ಬುಡ್ಡಪ್ಪನ ಜೊತೆ ಸೇರಿ ಲಕ್ಷ್ಮೀಪುರದ ಖಾಲಿ ತೋಪಿನಲ್ಲಿ ಶ್ರೀಧರನೊಂದಿಗೆ ಮದ್ಯಪಾನದ ಪಾರ್ಟಿ ಮಾಡಿದ್ದ. ಬಳಿಕ ಮೂವರೂ ಸೇರಿ ಅಮಲಿನಲ್ಲಿದ್ದ ಶ್ರೀಧರನನ್ನ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು.
ಫೆಬ್ರವರಿ 7ರಂದು ಸುಟ್ಟ ಸ್ಥಿತಿಯಲ್ಲಿದ್ದ ಶವ ಕಂಡ ಜಮೀನಿನ ಮಾಲೀಕ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಫೆಬ್ರವರಿ 9 ರಂದು ಮೃತನ ಕಿವಿಯಲ್ಲಿದ್ದ ಓಲೆ, ಮೈ ಮೇಲೆ ಸುಟ್ಟ ಸ್ಥಿತಿಯಲ್ಲಿದ್ದ ಬಟ್ಟೆಯನ್ನ ಮೃತನ ಸಹೋದರ ಗುರುತಿಸಿದ್ದ ಬಳಿಕ ಸತ್ತವನು ಶ್ರೀಧರ್ ಎಂಬುದು ಪತ್ತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸೋಲದವೇನಹಳ್ಳಿ ಠಾಣಾ ಇನ್ಸ್ಪೆಕ್ಟರ್ ಗೌತಮ್. ಜೆ ನೇತೃತ್ವದ ತಂಡ ತನಿಖೆ ಕೈಗೊಂಡು ಮೊದಲು ಆರೋಪಿ ಬುಡ್ಡಪ್ಪನನ್ನ ಬಂಧಿಸಿತ್ತು. ಬಳಿಕ ಆತನ ಮಾಹಿತಿ ಅನ್ವಯ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದ ವೀರಾಂಜನೇಯಲು, ಗೋವರ್ಧನನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹುಣಸೇಬೀಜ ಆಟವಾಡುತ್ತಿದ್ದ ವೃದ್ಧನ ತಲೆ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ- ಆನೇಕಲ್: ಇನ್ನೊಂದೆಡೆ ಕಳೆದ ಶನಿವಾರ ರಾತ್ರಿ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲನಿಯಲ್ಲಿ ವೃದ್ದನೋರ್ವನನ್ನ ಯುವಕರ ತಂಡ ಸೈಜು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ನಡೆದಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆವರಣಕ್ಕೆ ಹೊಂದಿಕೊಂಡಂತಿರುವ ಹಕ್ಕಿಪಿಕ್ಕಿ ಕಾಲನಿಯ ವಿಷ್ಣುವರ್ಧನ್ ಮನೆ ಮುಂದೆ ರಕ್ತದ ಮಡುವಿನಲ್ಲಿ 58 ವರ್ಷದ ದೊಡ್ಡ ಮಾದಯ್ಯ ಕೊಲೆಯಾದ ಸ್ಥಿತಿಯಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದಾನೆ.
ಸುವರ್ಣಮುಖಿ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದಾಗ ಆರಿಸುವ ಕೆಲಸದಲ್ಲಿದ್ದ ದೊಡ್ಡ ಮಾದಯ್ಯ. ಹಕ್ಕಿಪಿಕ್ಕಿ ಕಾಲನಿಯ ಯುವಕರಾದ ತರುಣ್, ನಾಗಮಾದ, ಸೈಪಲ್, ರವಿ ಮತ್ತು ಈಸುರೊಂದಿಗೆ 'ಪಚ್ಚಿ' ಹುಣಸೇ ಬೀಜದ ಆಟ ಆಡುವಾಗ ಮನಸ್ತಾಪವುಂಟಾಗಿ ದೊಡ್ಡ ಮಾದಯ್ಯನ ತಲೆಮೇಲೆ ಸೈಜುಗಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಕೊಲೆಯಾದ ದೊಡ್ಡಮಾದಯ್ಯನ ಮಗ ಪುಟ್ಟ ಮಾದಯ್ಯ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬನ್ನೇರುಘಟ್ಟ ಪಿಐ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ