ಬೆಂಗಳೂರು: ಅಪರಿಚಿತಳ ನಂಬಿ ಭೇಟಿಯಾಗಲು ಹೋದವನಿಗೆ ಬೆದರಿಸಿ ಸುಲಿಗೆ ಮಾಡಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣಾ ವ್ಯಾಪ್ತಿಯ ಗುರಪ್ಪನ ಪಾಳ್ಯದಲ್ಲಿ ನಡೆದಿದೆ.
ಸುಲಿಗೆಗೊಳಗಾದ 32 ವರ್ಷದ ವ್ಯಕ್ತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಯುವತಿಯೂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲೀಮಾ ಸಾದಿಯಾ ಅಲಿಯಾಸ್ ಪ್ರಿಯಾ, ಜಾಹೀದ್ ಖುರೇಷಿ, ಫರ್ಹಾನ್ ಖಾನ್, ಸೈಯ್ಯದ್ ಮುತಾಹೀರ್ ಹಾಗೂ ಇಸ್ಮಾಯಿಲ್ ಬಂಧಿತರು.
ಪ್ರಕರಣದ ಹಿನ್ನೆಲೆ: ಆನ್‌ಲೈನ್ ರಿಲೇಶನ್ಶಿಪ್ ನಂಬಿದ್ದ ದೂರುದಾರ ವ್ಯಕ್ತಿಗೆ ಪ್ರಿಯಾ ಎಂಬ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಅಕ್ಟೋಬರ್ 28ರಂದು ಮೆಸೇಜ್ ಮಾಡಿದ್ದ ಯುವತಿ, ಮನೆಯಲ್ಲಿ ಯಾರೂ ಇಲ್ಲ. ಭೇಟಿಯಾಗೋಣ ಬಾ' ಅಂತಾ ಗುರಪ್ಪನ ಪಾಳ್ಯದ ಮನೆಯ ಲೊಕೇಶನ್ ಹಾಕಿ ದೂರುದಾರನನ್ನು ಮನೆಗೆ ಕರೆಸಿಕೊಂಡಿದ್ದಳು. ಭೇಟಿಯಾಗಲು ಹೋದ ದೂರುದಾರ ವ್ಯಕ್ತಿ ಮನೆಯೊಳಗೆ ಹೋಗುತ್ತಿದ್ದಂತೆ ಎಂಟ್ರಿಯಾದ ನಾಲ್ವರು ಯುವಕರು ದೂರುದಾರನನ್ನು ಬೆದರಿಸಿ ಯುವತಿಯ ಪಕ್ಕ ಕೂರಿಸಿ ವಿಡಿಯೋ ಚಿತ್ರೀಕರಿಸಿಕೊಂಡು ಬೆದರಿಸಲಾರಂಭಿಸಿದ್ದರು. ಚಾಕು ತೋರಿಸಿ ಒಂದು ಲಕ್ಷ ರೂ ಕೊಡುವಂತೆಯೂ ಬೆದರಿಕೆಯೊಡ್ಡಿದ್ದರು.
ಬಳಿಕ ಆತನಿಂದ 26 ಸಾವಿರ ರೂ ನಗದು, ಐಫೋನ್, ಕಾರ್ ಕೀ ಪಡೆದಿದ್ದರು. ಹೀಗಾಗಿ 25 ಸಾವಿರ ರೂ ಹಣವನ್ನು ಸಹೋದರನಿಂದ ಯುಪಿಐ ಮೂಲಕ ದೂರುದಾರ ಆರೋಪಿಗಳಿಗೆ ವರ್ಗಾವಣೆ ಮಾಡಿಸಿ ಸ್ಥಳದಿಂದ ಕಾಲ್ಕಿತ್ತಿದ್ದ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಅಕ್ಟೋಬರ್ 29 ರಂದು ಪುನಃ ಕರೆ ಮಾಡಿ 'ಕಾರು ವಾಪಸ್ ಬೇಕೆಂದ್ರೆ 60 ಸಾವಿರ ನೀಡುವಂತೆ' ಬೆದರಿಕೆ ಹಾಕಿದ್ದರು. ಹೀಗಾಗಿ ಇದರಿಂದ ಬೇಸತ್ತ ವಂಚನೆಗೊಳಗಾದ ವ್ಯಕ್ತಿ ಸುದ್ದಗುಂಟೆಪಾಳ್ಯ ಠಾಣೆಗೆ ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಇದೇ ರೀತಿ ಇನ್ನೂ ಅನೇಕರಿಗೆ ವಂಚಿಸಿರುವ ಸಾಧ್ಯತೆಯಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಫಾರಿನ್ ಗೆಳತಿ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ