ಬೆಂಗಳೂರು: ನಕಲಿ ಆಭರಣದಂಗಡಿ ತೆರೆದಿದ್ದ ವಂಚಕನೊಬ್ಬ ತಾನು ಹೊಸದಾಗಿ ಬಿಸ್ನೆಸ್ ಮಾಡುತ್ತಿರುವುದಾಗಿ ನಂಬಿಸಿ ಪರಿಚಯಸ್ಥರಿಂದ ಚಿನ್ನ ಪಡೆದು ವಂಚಿಸುತ್ತಿದ್ದ. ಈತನನ್ನು ಇದೀಗ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.
ಕಾಟನ್‌ಪೇಟೆಯಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿರುವ ಸೋಹಿದುಲ್ ಮೊಂಡೆಲ್ ನೀಡಿದ ದೂರಿನ ಮೇರೆಗೆ ಆರೋಪಿ ಫರ್ಹಾನ್ ಅಬ್ಬಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು 5 ಲಕ್ಷ ರೂ ಮೌಲ್ಯದ 115 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.
ಗೌರಿಬಿದನೂರು ಮೂಲದ ಫರ್ಹಾನ್ ಹಾಗೂ ಆತನ ಸಹಚರರು ರಾಜಾಜಿನಗರದ ಬಳಿ ಅಂಗಡಿ ಬಾಡಿಗೆ ಪಡೆದು ವಸುಂಧರ ಜ್ಯುವೆಲ್ಲರಿ ಶಾಪ್ ಚಿನ್ನದ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ನಮಗೆ ವಿವಿಧ ಮಾದರಿಯ ಚಿನ್ನದ ಡಿಸೈನ್ ಬೇಕಾಗಿದೆ ಎಂದು ದೂರುದಾರರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬೇಡಿಕೆ ಇಟ್ಟಿದ್ದರು.
ಈ ಬೇಡಿಕೆ ಪಡೆದು ತರಹೇವಾರಿ ಚಿನ್ನದ ಡಿಸೈನ್ಗಳನ್ನು ಸಿಬ್ಬಂದಿ ತಯಾರಿಸಿದ್ದಾರೆ. ಕಳೆದ ತಿಂಗಳು 31ರಂದು ಹೊಸದಾಗಿ ತೆರೆದಿದ್ದ ಜ್ಯುವೆಲ್ಲರಿ ಶಾಪ್ಗೆ ಆರೋಪಿಗಳು, ಸಿಬ್ಬಂದಿಗೆ ಚಿನ್ನ ತರುವಂತೆ ಹೇಳಿ ಕರೆಸಿಕೊಂಡಿದ್ದಾರೆ. ಈ ವೇಳೆ ಖರೀದಿ ಸೋಗಿನಲ್ಲಿ ಆರ್ಡರ್ ಕೊಟ್ಟಿದ್ದ ಚಿನ್ನಾಭರಣ ಪಡೆದುಕೊಂಡಿದ್ದಾರೆ. ಪರಿಶೀಲನೆ ನಡೆಸಿ ಚಿನ್ನದ ಅಸಲಿತನ ಬಗ್ಗೆ ಪರೀಕ್ಷಿಸಿಕೊಂಡು ಬರುವುದಾಗಿ ಹೇಳಿ ಅಲ್ಲಿಂದ ಅಂಗಡಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಸಂಜೆಯಾದರೂ ಫರ್ಹಾನ್ ಬರದಿರುವುದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಅರಬಗಟ್ಟೆ ವಸತಿ ಶಾಲೆಯಲ್ಲಿ ಆರು ಮಕ್ಕಳಿಗೆ ಕೊರೊನಾ.. ಶಾಸಕ ರೇಣುಕಾಚಾರ್ಯ ಭೇಟಿ