ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಗೊಟ್ಟಿಗೆರೆ ನೈಸ್ ರಸ್ತೆಯಲ್ಲಿ ನಡೆದಿದೆ.
ಈಶ್ವರಪ್ಪ ಎಂಬುವರು ಫೋರ್ಡ್ ಐಕಾನ್ ಕಾರಿನಲ್ಲಿ ಸಂಬಂಧಿಕರಿಗೆ ತಮ್ಮ ಮಗಳ ಮದುವೆ ಆಹ್ವಾನ ಪತ್ರಿಕೆ ನೀಡಲು ತೆರಳುತ್ತಿದ್ದರು. ಗೊಟ್ಟಿಗೆರೆ ನೈಸ್ ರಸ್ತೆಯ ಸಮೀಪದ ಕಗ್ಗಲಿಪುರ ರಸ್ತೆಯ ಬಳಿ ಹೋಗುತ್ತಿರುವ ವೇಳೆ ಏಕಾಏಕಿ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಪ್ರಶಾಂತ್ ಸಮಯ ಪ್ರಜ್ಞೆಯಿಂದ ಕಾರನ್ನು ರಸ್ತೆಯ ಬದಿಗೆ ನಿಲ್ಲಿಸಿ, ಕಾರಿನ ಹಿಂಬದಿಯ ಡೋರ್ ಲಾಕ್ ಆಗಿದ್ದರಿಂದ ಗಾಜನ್ನು ಒಡೆದು ಕಾರಿನಲ್ಲಿದ್ದವರನ್ನು ಕೆಳಗಿಳಿಸಿದ್ದಾನೆ.
ಇನ್ನು ಕಾರು ಕ್ಷಣಾರ್ಧದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.