ಬೆಂಗಳೂರು : ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುವಾಗ ಕೆಂಗೇರಿ ಸಮೀಪ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯ ಆರೋಗ್ಯವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿಚಾರಿಸಿದರು.
ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಯಶಸ್ವಿನಿಯ ಕತ್ತಿನ ಬೆನ್ನುಮೂಳೆಯ ಎರಡು ವರ್ಟೆಬ್ರಿಯಾಗಳಿಗೆ ತೀವ್ರವಾಗಿ ಹಾನಿಯಾಗಿದೆ. ವಿದ್ಯಾರ್ಥಿನಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು, ಅದನ್ನು ಮಾಡಿ ಎಂದು ಆಸ್ಪತ್ರೆಯ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.
ಆಸ್ಪತ್ರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿದ ಸಚಿವರು, ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಕ್ಷಣವೇ ಒಂದು ಲಕ್ಷ ರೂ. ನೀಡಬೇಕೆಂದು ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.
ಆಸ್ಪತ್ರೆಯಿಂದಲೇ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸುರೇಶ್ ಕುಮಾರ್, ವಿದ್ಯಾರ್ಥಿನಿಯ ತಂದೆ ಸೆಕ್ಯೂರಿಟಿ ನೌಕರಿ ಮಾಡುತ್ತಿದ್ದು, ತೀವ್ರ ಬಡತನದಲ್ಲಿರುವುದರಿಂದ ಇಲಾಖೆ ವತಿಯಿಂದಲೂ ಸಾಧ್ಯವಾದಷ್ಟು ನೆರವು ನೀಡಬೇಕೆಂದು ಕೋರಿದರು.
ಓದಿ: ಉನ್ನತ ಶಿಕ್ಷಣ, ಸಂಶೋಧನೆಗೆ ಅಗ್ರಮಾನ್ಯತೆ ; ರಾಷ್ಟ್ರನಿರ್ಮಾಣಕ್ಕೆ ಪೂರಕ ಬಜೆಟ್-ಡಿಸಿಎಂ
ನಗರ ಸಂಚಾರಿ ಜಂಟಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದಾಗ ಅವರೂ ಸಹ ಯಶಸ್ವಿನಿ ಚಿಕಿತ್ಸೆಗೆ ವೈಯಕ್ತಿಕವಾಗಿ ಸಹಾಯ ಮಾಡಲು ಮುಂದೆ ಬಂದರು.
ಬಾಲಕಿಯನ್ನು ಮಾತನಾಡಿಸಿದ ಸುರೇಶ್ ಕುಮಾರ್, ಧೈರ್ಯವಾಗಿರು ಚಿಕಿತ್ಸೆ ಯಶಸ್ವಿಯಾಗಿ ನೀನು ಮೊದಲಿನಂತಾಗುತ್ತೀಯಾ.. ನಿನ್ನ ಹೆಸರೇ 'ಯಶಸ್ವಿನಿ', ಚಿಕಿತ್ಸೆಯಲ್ಲಿ ಯಶಸ್ಸು ನಿನ್ನದಾಗುತ್ತದೆ. ಯಾವುದಕ್ಕೂ ಹೆದರಬೇಡ ಎಂದು ಧೈರ್ಯ ತುಂಬಿದರು.
ಬಾಲಕಿಯ ತಂದೆ ತಾಯಿಯೊಂದಿಗೂ ಮಾತನಾಡಿದ ಸಚಿವರು, ತಮ್ಮ ಮಗಳು ಚೇತರಿಸಿಕೊಂಡು ಮೊದಲಿನಂತಾಗುತ್ತಾಳೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.