ಆನೇಕಲ್(ಬೆಂಗಳೂರು ನಗರ): ಅತಿ ವೇಗವಾಗಿ ಬಂದ ಲಾರಿಯೊಂದು ರಸ್ತೆ ದಾಟುತ್ತಿದ್ದ ಮಹಿಳೆಯರ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಂಗಳೂರು - ಹೊಸೂರು ರಾಷ್ಟೀಯ ಹೆದ್ದಾರಿ 44 ರ ಬೊಮ್ಮಸಂದ್ರದ ಬಳಿ ಸಂಭವಿಸಿದೆ. ಆಂಧ್ರಪ್ರದೇಶ ಮೂಲದ ಮದನಪಲ್ಲಿಯ ನಿವಾಸಿ ಎಂಟು ತಿಂಗಳ ಗರ್ಭಿಣಿ ರುಕಿಯಾ (28) ಹಾಗೂ ಲಕ್ಷ್ಮಮ್ಮ (50) ಮೃತ ದುರ್ದೈವಿಗಳು.
ಗುರುವಾರ ಬೆಳಗ್ಗೆ 11 ಗಂಟೆಗೆ ಇಬ್ಬರು ಮಹಿಳೆಯರು ಖಾಸಗಿ ಆಸ್ಪತ್ರೆಗೆ ಹೋಗುವಾಗ ಹೆದ್ದಾರಿ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರುಕಿಯಾ ಎಂಟು ತಿಂಗಳ ತುಂಬು ಗರ್ಭಿಣಿ. ಹೊಟ್ಟೆಯಲ್ಲಿ ಬೆಳೆಯತ್ತಿದ್ದ ಮಗುವಿನ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಸಲಹೆ ನೀಡಿದ ಹಿನ್ನೆಲೆ ಅಕ್ಕ ರಾಬಿಯಾ ಜೊತೆಗೆ ಗರ್ಭಿಣಿ ರುಕಿಯಾ ಆಂಧ್ರಪ್ರದೇಶದ ಮದನಪಲ್ಲಿಯಿಂದ ವರ್ತೂರಿಗೆ ಬಂದಿದ್ದರು. ಲಕ್ಷ್ಮಮ್ಮ ವರ್ತೂರಿನಲ್ಲಿ ನೆಲೆಸಿದ್ದರು. ರೂಕಿಯಾಗೆ ಲಕ್ಷ್ಮಮ್ಮ ನ ಪರಿಚಯವಿತ್ತು. ಲಕ್ಷಮ್ಮ, ರೂಕಿಯಾ ತನ್ನ ಅಕ್ಕ ರಾಬಿಯಾ ಸೇರಿಕೊಂಡು ಗುರುವಾರ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೊರಟಿದ್ದರು.
ರೂಕಿಯಾ ಎಂಟು ತಿಂಗಳು ಗರ್ಭಿಣಿಯಾಗಿದ್ದರಿಂದ ಸ್ಕೈವಾಕ್ ಹತ್ತಲು ಆಗದಿದ್ದರಿಂದ ಬಸ್ ಇಳಿದವರೇ ನೇರ ಹೆದ್ದಾರಿ ದಾಟಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಹೋಗುತ್ತಿದ್ದರು. ಈ ವೇಳೆ, ಬೆಂಗಳೂರಿನ ಕಡೆಯಿಂದ ಅತ್ತಿಬೆಲೆ ಕಡೆಗೆ ಹೊರಟಿದ್ದ ಲಾರಿಯೊಂದು ವೇಗವಾಗಿ ಬಂದು ಗರ್ಭಿಣಿ ಸೇರಿ ಪರಿಚಯವಿದ್ದ ಮಹಿಳೆಯ ಮೇಲೆ ಲಾರಿ ಹರಿದ ಪರಿಣಾಮ ಎರಡು ದೇಹಗಳು ಛಿದ್ರಗೊಂಡಿವೆ. ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಹೆಬ್ಬಗೋಡಿ ಪೊಲೀಸರು ಚಾಲಕ ವಾಹನವನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ಕೌಟುಂಬಿಕ ಕಲಹ ಹಿನ್ನೆಲೆ: ಮನನೊಂದು ವಿವಾಹಿತ ಯುವಕ ಆತ್ಮಹತ್ಯೆ
ಕಾಲೇಜು ಕಟ್ಟಡ ಮೇಲಿಂದ ವಿದ್ಯಾರ್ಥಿನಿ ಜಿಗಿದು ಆತ್ಮಹತ್ಯೆ: ಮತ್ತೊಂದು ಕಡೆ, ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಚನ್ನರಾಯಪಟ್ಟಣ ಸಮೀಪದ ಹೊನ್ನ ಶೆಟ್ಟಿಹಳ್ಳಿ ಗ್ರಾಮದ ಯುವತಿ ಹಾಸನ ನಗರದ ಹೊರವಲಯದಲ್ಲಿರುವ ಕಾಲೇಜುವೊಂದರಲ್ಲಿ ಡಿಪ್ಲೋಮಾ ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಇನ್ನು ಸಾವಿಗೆ ನಿಕರ ಕಾರಣ ತಿಳಿದು ಬಂದಿಲ್ಲ ಆದರೆ, ಪರೀಕ್ಷೆಯಲ್ಲಿ ನಕಲು ಮಾಡಿ ಉಪನ್ಯಾಸಕರ ಕೈಗೆ ಸಿಕ್ಕಿ ಬಿದ್ದಿದಳು ಎನ್ನಲಾಗಿದೆ. ಇದರಿಂದ ತನ್ನ ಮರ್ಯಾದೆ ಹಾಳಾಯ್ತು ಎಂಬ ಕಾರಣಕ್ಕೆ ಕಾಲೇಜಿನ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿನಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.