ಬೆಂಗಳೂರು/ನೆಲಮಂಗಲ: ಗುರುವಾರ ಬೆಳಗಿನ ಜಾವ ದಟ್ಟವಾದ ಮಂಜು ರಾಜಧಾನಿಯ ಸುತ್ತ ಆವರಿಸಿದ್ದರಿಂದ ಹೊರವಲಯ ನೆಲಮಂಗಲದ ಸಮೀಪ ರಾಷ್ಟ್ರೀಯ ಹೆದ್ದಾರಿ ಟಿ. ಬೇಗೂರಿನ ಬಳಿ ಗುರುವಾರ ಸರಣಿ ಅಪಘಾತ ನಡೆದಿದೆ.
ದಟ್ಟವಾದ ಮಂಜು ಕವಿದಿದ್ದರಿಂದ ಲಾರಿಯ ಚಾಲಕ ಅಚಾನಕ್ಕಾಗಿ ಬ್ರೇಕ್ ಹಾಕಿದ್ದಾನೆ. ಹಿಂಬದಿಯಿಂದ ಬರುತ್ತಿದ್ದ ಎರಡು ಬಸ್, ಕಾರುಗಳು, ಲಾರಿಗಳು ಮತ್ತು ಒಂದು ಜೀಪ್ ಸರಣಿ ಅಪಘಾತಕ್ಕೀಡಾಗಿವೆ. ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಪಘಾತದಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕನೊಬ್ಬ ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈರುಳ್ಳಿ ಚೆಲ್ಲಾಪಿಲ್ಲಿ: ಭೀಕರ ಅಪಘಾತದಿಂದ ಕ್ಯಾಂಟರ್ನಲ್ಲಿದ್ದ ಈರುಳ್ಳಿ ಚೆಲ್ಲಾಪಿಲ್ಲಿಯಾಗಿವೆ. ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಓದಿ: ಕನ್ನಡದ ಮೂರು ಪುಸ್ತಕಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ