ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಕಳೆದ 10 ತಿಂಗಳಲ್ಲಿ 40 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಗರದ ವಿವಿಧ ಠಾಣಾ ವ್ಯಾಪ್ತಿಗಳಿಗೆ ಹೋಲಿಸಿದರೆ ಯಲಹಂಕದಲ್ಲಿ ಹೆಚ್ಚು ಅಪಘಾತವಾಗಿ ಜೀವ ತೆತ್ತಿದ್ದಾರೆ.
ಈ ಮೂಲಕ ಡೆಡ್ಲಿ ರಸ್ತೆಯಾಗಿ ಯಲಹಂಕ ರಸ್ತೆ ಕುಖ್ಯಾತಿ ಪಡೆದುಕೊಂಡಿದೆ. ಯಲಹಂಕ ನಂತರ ಚಿಕ್ಕಜಾಲ (38), ಕಾಮಾಕ್ಷಿಪಾಳ್ಯ (37), ಕೆಂಗೇರಿಯಲ್ಲಿ 30 ಮಂದಿ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. 2021ರಲ್ಲಿ ಯಲಹಂಕದಲ್ಲಿ 52 ಮಂದಿ ಸಾವನ್ನಪ್ಪಿದ್ದರು. ನಂತರ ಸ್ಥಾನದಲ್ಲಿ ಕಾಮಾಕ್ಷಿಪಾಳ್ಯ, ಕೆ. ಎಸ್ ಲೇಔಟ್, ಕೆಂಗೇರಿ ಹಾಗೂ ಪೀಣ್ಯದಲ್ಲಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಯಲಹಂಕ, ಚಿಕ್ಕಜಾಲದಲ್ಲಿ ಹೆಚ್ಚು ಆಕ್ಸಿಡೆಂಟ್ ಯಾಕೆ ?: ದೇಶದ ಪ್ರಮುಖ ಏರ್ ಪೋರ್ಟ್ಗಳಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವೂ ಒಂದಾಗಿದ್ದು, ಪ್ರತಿ ವರ್ಷ ಒಂದೂವರೆ ಕೋಟಿ ರೂ. ಗಿಂತ ಹೆಚ್ಚು ಪ್ರಯಾಣಿಕರು ದೇಶ - ವಿದೇಶಗಳಿಂದ ಬಂದು ಹೋಗುತ್ತಾರೆ. ವಾಹನಗಳ ಸಂಖ್ಯೆಗೆ ಅನುಗುಣವಾಗಿ ಹೆಬ್ಬಾಳದ ಎಸ್ಟೀಂ ಮಾಲ್ನಿಂದ ಏರ್ಪೋರ್ಟ್ವರೆಗೂ ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆ ನಿರ್ಮಿಸಲಾಗಿದೆ.
ಲಕ್ಷಾಂತರ ವಾಹನಗಳು ಇದೇ ರಸ್ತೆಯಲ್ಲಿ ಹಾದು ಹೋಗಲಿದ್ದು, ವೇಗದ ಚಾಲನೆ ಹಾಗೂ ಅಜಾಗರೂಕತೆಯಿಂದ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಮಿತಿ ಮೀರಿದ ವೇಗದ ಚಾಲನೆಯಿಂದ ಮಾರಣಾಂತಿಕವಾಗಿ ಗಾಯಗೊಳ್ಳುವುದರ ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ದೇವನಹಳ್ಳಿ ಜೊತೆಗೆ ದೊಡ್ಡಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳು ವೇಗವಾಗಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ನಗರೀಕರಣದ ಪರಿಣಾಮ ವಾಹನಗಳ ಸಂಖ್ಯೆ ಅಧಿಕಗೊಂಡಿದೆ. ಹಾಗೆಯೇ ಅಪಘಾತಗಳ ಸಂಖ್ಯೆಯಲ್ಲೂ ಭಾರಿ ಹೆಚ್ಚಳವಾಗಿದೆ.
ಈ ರಸ್ತೆಗಳಲ್ಲಿ ಅಪಘಾತ ಕಡಿಮೆ: ಯಲಹಂಕ, ಚಿಕ್ಕಜಾಲಕ್ಕೆ ಹೋಲಿಸಿದರೆ ಕಬ್ಬನ್ ಪಾರ್ಕ್, ಹಲಸೂರು ಗೇಟ್, ಹೈಗ್ರೌಂಡ್, ಪುಲಕೇಶಿನಗರ, ಇಂದಿರಾನಗರ, ಶಿವಾಜಿನಗರ, ಉಪ್ಪಾರಪೇಟೆ, ಶಿವಾಜಿನಗರ, ಚಿಕ್ಕಪೇಟೆ, ಆಡುಗೋಡಿ, ಮಲ್ಲೇಶ್ವರ ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಚು ಅಪಘಾತ ನಡೆಯುವ ಸ್ಥಳಗಳಲ್ಲಿ ಅಧ್ಯಯನ ನಡೆಸಲಾಗುವುದು ಎಂದು ಟ್ರಾಫಿಕ್ ಸ್ಪೆಷಲ್ ಕಮೀಷನರ್ ಎಂ ಎಂ ಸಲೀಂ ತಿಳಿಸಿದ್ದಾರೆ.
ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ