ಬೆಂಗಳೂರು: ಸರಕು ಸಾಗಾಣಿಕೆ ವಾಹನ ಚಾಲಕರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದ ಹೋಂ ಗಾರ್ಡ್ ಹಾಗೂ ಇಬ್ಬರು ಇನ್ಸ್ಪೆಕ್ಟರ್ಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ನಲ್ಲಿ ನಿನ್ನೆ ರಾತ್ರಿ ಇವರು ಹಣ್ಣು ಮತ್ತು ತರಕಾರಿ ಸಾಗಣೆ ಮಾಡುತ್ತಿದ್ದ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರಂತೆ. ಈ ಬಗ್ಗೆ ಜಿಲ್ಲಾಧಿಕಾರಿ ಶಿವಮೂರ್ತಿಗೆ ಅಲ್ಲಿನ ಸ್ಥಳೀಯರು ದೂರು ನೀಡಿದ್ದರು. ಈ ವಿಷಯವನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ. ಡಿ. ಚನ್ನಣನವರ್ ಗಮನಕ್ಕೆ ತರಲಾಗಿತ್ತು.
ಕೂಡಲೇ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್, ಮಾರುವೇಷದಲ್ಲಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ಸಂಬಂಧ ಬೆಂಗಳೂರು ಜಿಲ್ಲಾಧಿಕಾರಿ ಶಿವಮೂರ್ತಿ, ಇಬ್ಬರೂ ಇನ್ಸಪೆಕ್ಟರ್ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ಸ್ಪೆಕ್ಟರ್ಗಳಾದ ಟಿ.ಕೆ.ಜಯಣ್ಣ ಹಾಗೂ ಕರಿಯಪ್ಪ ಅಮಾನತುಗೊಂಡವರು. ಇವರೊಂದಿಗೆ ಶಾಮೀಲಾಗಿದ್ದ ಮಾಜಿ ಹೋಂ ಗಾರ್ಡ್ ವಿವೇಕ್ ಎಂಬುವರನ್ನು ಚಾಲಕರಿಂದ ಲಂಚ ಪಡೆದ ಹಿನ್ನೆಲೆ ಅಪರ ಪೊಲೀಸ್ ಅಧೀಕ್ಷಕ ಸಜಿತ್ ಅವರಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ 15,500 ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.