ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಏಳು ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಎಸಿಬಿ ದಾಳಿ ನಡೆಸಲಾಗಿದೆ.
ದಾಳಿ ವೇಳೆಯಲ್ಲಿ ಬಹುತೇಕ ಅಧಿಕಾರಿ ಮನೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ನಗದು ಪತ್ತೆಯಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪತ್ರಗಳನ್ನು ಸಿಕ್ಕಿವೆ. ಇಂದು ದಾಳಿಯಲ್ಲಿ ಪತ್ತೆಯಾದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಸಂಪೂರ್ಣ ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ವಿವರಗಳು:
ಮಂಗಳೂರು ಮಹಾನಗರ ಪಾಲಿಕೆಯ ನಗರ ಮತ್ತು ಗ್ರಾಮಾಂತರ ಯೋಜನೆ ಜಂಟಿ ನಿರ್ದೇಶಕ ಕೆ.ವಿ. ಜಯರಾಜ್ಗೆ ಸೇರಿದ 2 ವಾಸದ ಮನೆ, 3 ನಿವೇಶನ, 11 ಲಕ್ಷ ರೂ. 10 ಲಕ್ಷ, ವಿಮಾ ಬಾಂಡ್‌ಗಳು, ಬ್ಯಾಂಕ್ ಖಾತೆಗಳಲ್ಲಿ 77 ಲಕ್ಷ ರೂ., ಪತ್ನಿಯ ಹೆಸರಿನಲ್ಲಿ 20 ಲಕ್ಷ ರೂ. ಠೇವಣಿ, 191 ಗ್ರಾಂ ಚಿನ್ನದ ವಡವೆಗಳು, 1 ಕೆ.ಜಿ ಬೆಳ್ಳಿಯ ವಸ್ತುಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಎಸಿಬಿ ಪೊಲೀಸ್ ಅಧೀಕಕ್ಷ ಭೋಪಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಈ ಹಿಂದೆ ಧಾರವಾಡ ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಾಹಕ ಅಭಿಯಂತರಾಗಿದ್ದ ದೇವರಾಜ ಕಲ್ಮೇಶ ಶಿಗ್ಗಾಂವಿ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಇವರಿಗೆ ಸೇರಿದ 2 ವಾಸದ ಮನೆಗಳು, 2 ನಿವೇಶನಗಳು, 2 ಕಾರುಗಳು, 26 ಎಕರೆ ಕೃಷಿ ಜಮೀನು, 59.84 ಲಕ್ಷ ರೂ., ಬ್ಯಾಂಕ್ ಖಾತೆಗಳಲ್ಲಿ 30 ಲಕ್ಷ ರೂ. ಠೇವಣಿ, 500 ಗ್ರಾಂ ಚಿನ್ನದ ಒಡವೆಗಳು, 4 ಕೆಜಿ ಬೆಳಿ ವಸ್ತುಗಳು, ಅಂದಾಜು ಸುಮಾರು 3 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಹೊಂದಿರುವುದು ಗೊತ್ತಾಗಿದೆ. ಧಾರವಾಡ ಎಸಿಬಿ ವಿಭಾಗದ ಉತ್ತರ ವಲಯದ ಪೊಲೀಸ್ ಅಧೀಕ್ಷಕ ನೇಮಗೌಡ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಕೋಲಾರದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎನ್.ವಿಜಯಕುಮಾರ್ಗೆ ಸೇರಿದ 3 ವಾಸದ ಮನೆಗಳು, 3 ಪ್ಲ್ಯಾಟ್‌ಗಳು, 3 ನಿವೇಶನಗಳು, 1 ಖಾಸಗಿ ಆಸ್ಪತ್ರೆ, 2 ಕಾರ್‌ಗಳು, 1 ದ್ವಿಚಕ್ರ ವಾಹನ, ಬ್ಯಾಂಕ್ ಖಾತೆಗಳಲ್ಲಿ 61,21,352 ರೂ. ಠೇವಣಿಗಳು, 1 ಎಕರೆ 13 ಗಂಟೆ ಕೃಷಿ ಜಮೀನು ಪತ್ತೆಯಾಗಿದೆ.
ಕೋಲಾರದಲ್ಲಿರುವ ಮನೆ, ಕಚೇರಿ, ಮುಳಬಾಗಿಲು, ಚಿಂತಾಮಣಿಯಲ್ಲಿದ್ದ ಮನೆ ಹಾಗೂ ಅವರ ಖಾಸಗಿ ಆಸ್ಪತ್ರೆ ಸೇರಿ 6 ಕಡೆಗಳಲ್ಲಿ ಎಸಿಬಿ ಕೇಂದ್ರ ವಲಯದ ಪೊಲೀಸ್ ಅಧೀಕ್ಷಕಿ ಕಲಾ ಕೃಷ್ಣ ಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸಹಕಾರ ಸೌಧ, ಬೆಂಗಳೂರು ವಿಭಾಗ, ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಡಿ. ಪಾಂಡುರಂಗ ಗರಗ್ಗೆ ಸೇರಿದ 2 ವಾಸದ ಮನೆಗಳು, 1 ಫ್ಲಾಟ್, 3 ಕಾರುಗಳು, 1 ಟ್ರ್ಯಾಕ್ಟರ್, 3 ದ್ವಿಚಕ್ರ ವಾಹನಗಳು, 1 ಕೆ.ಜಿ. 166 ಗ್ರಾಂ ಚಿನ್ನಾಭರಣ, 20 ಲಕ್ಷ ವಿಮಾ ಪಾಲಿಸಿಗಳು, 31 ಕೆಜಿ ಬೆಳ್ಳಿ ವಸ್ತುಗಳು, 10 ಎಕರೆ ಕೃಷಿ ಜಮೀನು, 4.44 ಲಕ್ಷ ರೂ. ಹಣ, ಅಂದಾಜು 20 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಹೊಂದಿರುವುದು ಕಂಡು ಬಂದಿದೆ. ವಿಜಯನಗರದಲ್ಲಿರುವ ಮನೆ, ಜಯನಗರದಲ್ಲಿರುವ ಸಂಬಂಧಿ ಮನೆ, ಚಿತ್ರದುರ್ಗ ತಾಲೂಕಿನ ಹೊಸದುರ್ಗದಲ್ಲಿರುವ ಮನೆ, ಮಲ್ಲೇಶ್ವರದಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ವಿಭಾಗದ ಎಸ್‌ಪಿ ಕುಲದೀಪ್ ಕುಮಾರ್ ಆರ್. ಜೈನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಧಾರವಾಡ ಜಿಲ್ಲೆಯ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಅವರಿಗೆ ಸೇರಿದ 2 ವಾಸದ ಮನೆಗಳು, 1 ಫಾರ್ಮ್ ಹೌಸ್, 2 ನಿವೇಶನಗಳು, 2 ಕಾರುಗಳು, 1 ಟ್ರ್ಯಾಕ್ಟರ್, 1 ದ್ವಿಚಕ್ರ ವಾಹನ, 850 ಗ್ರಾಂ ಚಿನ್ನಾಭರಣ, 3 ಕೆ.ಜಿ 500 ಗ್ರಾಂ ಬೆಳ್ಳಿ, 4.87 ಲಕ್ಷ ರೂ. ,ಬ್ಯಾಂಕ್ ಉಳಿತಾಯ ಖಾತೆಯಲ್ಲಿ 5 ಲಕ್ಷ ರೂ. ಅಂದಾಜು 63 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. ಎಸಿಬಿ ಎಸ್‌ಪಿ ಜಯಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿ ತನಿಖೆ ಮುಂದುವರೆಸಿದೆ.
ರಾಮನಗರ ಜಿಲ್ಲೆಯ ಲೋಕೋಪಯೋಗಿ ಉಪ ವಿಭಾಗ ಮಾಗಡಿಯ ಕಿರಿಯ ಇಂಜಿನಿಯರ್ ಚನ್ನಬಸಪ್ಪಗೆ ಸೇರಿದ 8 ಫ್ಲಾಟ್‌ಗಳು, 1 ಸೂಪರ್ ಮಾರ್ಟ್, 1 ಫಾರ್ಮ್ ಹೌಸ್, 2 ಕಾರುಗಳು, 2 ದ್ವಿಚಕ್ರ ವಾಹನಗಳು, 1,02,790 ರೂ., 125 ಗ್ರಾಂ ಚಿನ್ನದ ಆಭರಣ, 650 ಗ್ರಾಂ ಬೆಳ್ಳಿ ಹೊಂದಿರುವುದು ಕಂಡು ಬಂದಿದೆ. ಎಸಿಬಿ ಎಸ್‌ಪಿ ಮಹೇಶ್ ಮೇಘಣ್ಣವರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
ಕೊಪ್ಪಳದ ವಿಮ್ಸ್‌ನ ಮಾಜಿ ನಿರ್ದೇಶಕ ಹಾಗೂ ಕಿಮ್ಸ್‌ನ ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ಗೆ ಸೇರಿದ 1 ವಾಸದ ಮನೆ, 4 ನಿವೇಶನಗಳು, 2 ಕಾರುಗಳು, 2 ದ್ವಿಚಕ್ರ ವಾಹನಗಳು, 800 ಗ್ರಾಂ ಚಿನ್ನದ ವಡವೆ, 9 ಕೆಜಿ 300 ಗ್ರಾಂ ಬೆಳ್ಳಿಯ ವಸ್ತುಗಳು, 1.94 ಲಕ್ಷ ರೂ. ದಾಳಿ ವೇಳೆ ಪತ್ತೆಯಾಗಿದೆ. ಎಸಿಬಿ ಎಸ್‌ಪಿ ಗುರುನಾಥ್ ಮತ್ತೂರ್ ನೇತೃತ್ವದಲ್ಲಿ ಶೋಧನ ಕಾರ್ಯ ನಡೆಸಲಾಗಿದೆ.