ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸದಾಶಿವನಗರದಲ್ಲಿನ ಮನೆ ಗೋಡೆಗೆ ಅವಾಚ್ಯ ಪದ ಬಳಸಿ ಏಕವಚನದಲ್ಲಿ ನಿಂದಿಸಿರುವ ಪೋಸ್ಟರ್ ಅಂಟಿಸಿರುವ ಘಟನೆ ತಡರಾತ್ರಿ ನಡೆದಿದೆ. ಘಟನೆ ಕುರಿತು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಅಧಿಕಾರಿಗಳು ಆಗಮಿಸಿ, ಮನೆಗೆ ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ಗಳನ್ನು ತೆರವುಗೊಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಫೋಟೋ ಜೊತೆ ಅವಾಚ್ಯ ಪದಗಳನ್ನು ಬಳಸಿರುವುದು ಪೋಸ್ಟರ್ಗಳಲ್ಲಿದೆ. ಈ ರೀತಿಯ ಪೋಸ್ಟರ್ಗಳ ಜೊತೆ ಕೆಲವರು ರಾತ್ರಿ ವೇಳೆ ಏಕಾಏಕಿ ಬಂದಿದ್ದರು. ಬಳಿಕ ಸದಾಶಿವನಗರದಲ್ಲಿರುವ ಗೋಕಾಕ್ ಶಾಸಕ ಮತ್ತು ಮಾಜಿ ಸಚಿವ ರಮೇಶ ಅವರ ಮನೆಯ ಗೋಡೆ ಮತ್ತು ಗೇಟ್ಗಳಿಗೆ ಈ ಪೋಸ್ಟರ್ಗಳನ್ನು ಅಂಟಿಸಿ ನಿಂದಿಸಿದ್ದಾರೆ. ಪೋಸ್ಟರ್ಗಳನ್ನು ಅಂಟಿಸಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಸದ್ಯ ಸ್ಥಳಕ್ಕೆ ಸದಾಶಿವನರ ಪೊಲೀಸರು ಹಾಗೂ ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಶೀಘ್ರವೇ ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿ: ರಮೇಶ್ ಜಾರಕಿಹೊಳಿ ಭವಿಷ್ಯ
ನಿನ್ನೆಯಷ್ಟೇ ಬೆಳಗಾವಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಮಾತನಾಡಿದ್ದರು. ಇನ್ನು ಅವಾಚ್ಯ ಪೋಸ್ಟರ್ ಅಂಟಿಸಿದ ಪ್ರಕರಣದ ಬೆನ್ನಲ್ಲೇ ಇಂದು ಮತ್ತೆ ಸುದ್ದಿಗೋಷ್ಠಿ ಕರೆದಿದ್ದಾರೆ.
ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ: ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಹೈಕೋರ್ಟ್ನಲ್ಲಿ ಹಿನ್ನಡೆ ಸೇರಿ ಇನ್ನಿತರ ಕಾರಣಗಳಿಂದ ಡಿ ಕೆ ಶಿವಕುಮಾರ್ ಅವರು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಶೀಘ್ರದಲ್ಲೇ ಅವರು ಮಾಜಿ ಸಚಿವರಾಗುತ್ತಾರೆ ಎಂದು ಜಾರಕಿಹೊಳಿ ಭವಿಷ್ಯ ನುಡಿದಿದ್ದರು.
1 ರೂಪಾಯಿ ತಿಂದವರನ್ನು ಜೈಲಿಗೆ ಹಾಕುತ್ತಾರೆ. ಆದರೆ, ಡಿಕೆಶಿಯದು 40, 100 ಕೋಟಿ ರೂ ಅಕ್ರಮ ಇದೆ. ಐದೇ ವರ್ಷದಲ್ಲಿ ಐದು ಪಟ್ಟು ಆಸ್ತಿ ಹೆಚ್ಚಾದರೆ ಅದು ಎಲ್ಲಿಂದ ಬಂತು ಎಂಬ ಲೆಕ್ಕ ತೋರಿಸಬೇಕಲ್ಲವೇ? ಎಂದು ಪ್ರಶ್ನಿಸಿದ್ದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದೆ. 50, 100 ಕೋಟಿ ರೂ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಫೇಲ್ ಆಗಿದೆ. ಜನರ ದಿಕ್ಕು ಬದಲು ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಅವರು ಬಾಕಿ ಬಿಲ್ ಬಿಡುಗಡೆಗೆ ಒತ್ತಾಯಿಸಿದರೆ ಅವರಿಗೆ ನಾವು ಸಹಕಾರ ಕೊಡುತ್ತೇವೆ. ಸಿದ್ದರಾಮಯ್ಯ ಒಳ್ಳೆಯ ನಿರ್ಣಯ ತೆಗೆದುಕೊಂಡರೆ ಮಾತ್ರ ಈ ಸರ್ಕಾರ ಉಳಿಯುತ್ತದೆ. ಸಿದ್ದರಾಮಯ್ಯ ಬಿಟ್ಟು ಡಿಕೆಶಿ ಮುಖ್ಯಮಂತ್ರಿ ಆಗಿದ್ದರೆ ಕಥೆನೇ ಬೇರೆ ಆಗುತ್ತಿತ್ತು ಎಂದು ಕುಟುಕಿದರು.