ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಿಗದಿಗೆ ಬೆರಳೆಣಿಕೆಯಷ್ಟು ದಿನಗಳು ಇರುವಾಗ ರಾಜಕೀಯ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿವೆ. ಸಚಿವರು ಕಾಮಗಾರಿ ಕೈಗೊಳ್ಳದೇ 97 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮಾಡಿರುವ ಆರೋಪಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಇಂದು ಸ್ಟಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳಾಗಿವೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಪ್ರಾಮಾಣಿಕವಾಗಿ ನನ್ನ ಕ್ಷೇತ್ರದಲ್ಲಿ ಜವಾಬ್ದಾರಿಯುತನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಎಲ್ಲಿಯೂ ಕೂಡ ಲೋಪವಾಗಿಲ್ಲ. ಸುಖಾಸುಮ್ಮನೆ ನನ್ನ ಮೇಲೆ ಆಪಾದನೆ ಮಾಡುವ ಕೆಲಸವಾಗುತ್ತಿದೆ ಎಂದು ಅವರು ಹೇಳಿದರು.
ಲೋಕಾಯುಕ್ತ ಪೊಲೀಸರು ಹಾಗೂ ನ್ಯಾಯಾಲಯದ ಮೇಲೆ ಅಪಾರ ಗೌರವವಿದೆ. ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಿ ಅಗತ್ಯ ದಾಖಲೆಗಳನ್ನ ಒದಗಿಸುವೆ. ಚುನಾವಣೆ ಹಿನ್ನೆಲೆ ನನ್ನ ಇಮೇಜ್ ಗೆ ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದು ಸಚಿವ ಬೈರತಿ ಆರೋಪಿಸಿದರು.
ಒಂದು ವೇಳೆ ಲೋಪವಾಗಿದ್ದರೆ ನಾನು ಹೇಗೆ ಜವಾಬ್ದಾರಿಯಾಗುತ್ತೇನೆ. ಅದಕ್ಕಾಗಿ ಅಧಿಕಾರಿಗಳು ಇರುತ್ತಾರೆ. ಕ್ಷೇತ್ರಕ್ಕೆ ಅನುದಾನ ತರುವ ಕೆಲಸ ನನ್ನದು. ಕೆಲಸವಾಗದಿದ್ದರೆ ತಕ್ಷಣಕ್ಕೆ ಗಮನಕ್ಕೆ ತಂದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಈಗ ಲೋಪವಾಗಿದೆ ಆರೋಪಿಸಲಾಗುತ್ತಿದೆ ಎಂದು ತಿಳಿಸಿದರು.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ರೀತಿ ಕುತಂತ್ರ ಮಾಡಲಾಗಿದ್ದು, ಮೊಸರಲ್ಲಿ ಕಲ್ಲು ಹುಡುಕುವ, ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಿದ್ದು ನನಗೆ ತೀವ್ರ ಬೇಸರ ತರಿಸಿದೆ. ಚುನಾವಣೆಯಲ್ಲಿ ಜನರೇ ಪಾಠ ಕಲಿಸುವ ಮೂಲಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ದಾಖಲೆ ಸೃಷ್ಟಿಸಿ 97 ಕೋಟಿ ರೂಪಾಯಿ ವಂಚನೆ ಅಪಾದನೆ- ಸಚಿವ ಬೈರತಿ: ನಿನ್ನೆ ಬೈರತಿ ಬಸವರಾಜ್ ಸೇರಿ 10 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೆಆರ್ ಪುರ ವಿಧಾನಸಭೆ ಕ್ಷೇತ್ರದಲ್ಲಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ಮಂಜೂರು ಮಾಡಿಸಿ ಕಾಮಗಾರಿ ಕೈಗೊಳ್ಳದೇ ಕಾಗದಪತ್ರದಲ್ಲೇ ಕಟ್ಟಡ ನಿರ್ಮಾಣ ಮಾಡಿಸಿರುವುದಾಗಿ ದಾಖಲೆ ಸೃಷ್ಟಿಸಿ 97 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
ವಂಚನೆ ಜಾಲದ ಹಿಂದೆ ಸಚಿವ ಬೈರತಿ ಕೈವಾಡ- ಟಿ ಜೆ ಅಬ್ರಾಹಂ.. ವಂಚನೆ ಜಾಲದ ಹಿಂದೆ ಪ್ರಮುಖವಾಗಿ ಬೈರತಿ ಬಸವರಾಜ್ ಅವರ ಕೈವಾಡವಿದೆ. ಕೆಆರ್ ಪುರ ಕ್ಷೇತ್ರಕ್ಕೆ ಇದುವರೆಗೂ ಬಿಬಿಎಂಪಿ ಸಂಬಂಧಿಸಿದಂತೆ 1883 ಕಾಮಗಾರಿಗಳಿಗೆ 488 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ 97 ಕೋಟಿ ರೂಪಾಯಿ ಕಾಮಗಾರಿಗಳನ್ನು ಮಾಡದೇ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ 373 ಮಂದಿ ಗುತ್ತಿಗೆದಾರರಿದ್ದಾರೆ. 155 ಮಂದಿ ಗುತ್ತಿಗೆದಾರರಿಗೆ ಒಂದು ಗುತ್ತಿಗೆ ನೀಡಿದರೆ 78 ಮಂದಿ ಎರಡು ಗುತ್ತಿಗೆ ಹಾಗೂ 41 ಮಂದಿ ಮೂರು ಕಾಮಗಾರಿಗಳಿಗೆ ಆದೇಶ ಪಡೆದಿದ್ದಾರೆ. ಮುಖ್ಯವಾಗಿ ಇನ್ನೂ 15 ಮಂದಿ ಗುತ್ತಿಗೆದಾರರಿಗೆ 848 ಕಾಮಗಾರಿಗಳಿಗೆ ಕಾರ್ಯಾದೇಶ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ದೇವಸಂದ್ರ ವಾರ್ಡ್ ವೊಂದರಲ್ಲಿ ಶೌಚಾಲಯ ನಿರ್ಮಿಸದೆ ಅದರ ಹೆಸರಿನಲ್ಲಿ ಹಣ ಗುಳುಂ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ಆರೋಪಿಸಿದ್ದರು.
ಕಾಂಗ್ರೆಸ್ ಸೇರೋದು ಕೇವಲ ವದಂತಿ: ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿಯಾತ್ರೆಯಲ್ಲಿ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು , ಬಿಜೆಪಿಯ ಬೈರತಿ ಬಸವರಾಜ್ ಹಾಗೂ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿಕೆ ನೀಡಿದ್ದರು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಬಸವರಾಜ್ , ಬಿಜೆಪಿ ಶಾಲು ಹಾಕಿಕೊಂಡಿದ್ದು, ಚುನಾವಣಾ ಪ್ರಚಾರ ನಡೆಸುತ್ತಿದ್ದೇನೆ. ಭಾರತೀಯ ಜನತಾ ಪಕ್ಷದ ಕಟ್ಟಾಳು ಆಗಿದ್ದು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಯಾವ ದಿಗ್ಗಜ ಬಂದು ಏನೇ ಹೇಳಿದರೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂಓದಿ:97 ಕೋಟಿ ರೂ.ವಂಚನೆ ಆರೋಪ: ಸಚಿವ ಭೈರತಿ ಬಸವರಾಜ್ ಸೇರಿ 10 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು