ಬೆಂಗಳೂರು: ಕೊರೊನಾ ನಿಯಂತ್ರಿಸಲು ಹಾಗೂ ಸೋಂಕಿತರನ್ನು ಗುರುತಿಸಲು ರೂಪಿಸಿರುವ 'ಆರೋಗ್ಯ ಸೇತು' ಮೊಬೈಲ್ ಆ್ಯಪ್ ಅನ್ನು ವಿಮಾನ ಮತ್ತು ರೈಲು ಪ್ರಯಾಣಿಕರು ಬಳಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ಹೇಳಿದೆ.
ಡಿಜಿಟಲ್ ವಲಯದಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುತ್ತಿರುವ ಬೆಂಗಳೂರು ನಿವಾಸಿ ಅನಿವರ್ ಎ. ಅರವಿಂದ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹಾಗೂ ನ್ಯಾ. ಇ.ಎಸ್. ಇಂದಿರೇಶ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಯಿತು.
ಈ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ ವಾದ ಮಂಡಿಸಿ, ವಿಮಾನ ಮತ್ತು ರೈಲು ಪ್ರಯಾಣಿಕರಿಗೆ ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಳಕೆ ಕಡ್ಡಾಯವಲ್ಲ. ಅದು ಐಚ್ಛಿಕವಾಗಿದೆ. ಆ್ಯಪ್ ಬಳಸುವಂತೆ ಸಲಹೆಯಷ್ಟೇ ನೀಡಲಾಗಿದೆ. ಬೇಕೆನಿಸಿದವರು ಹಾಕಿಕೊಳ್ಳಬಹುದು, ಬೇಡವೆನಿಸಿದವರು ಬಿಟ್ಟುಬಿಡಬಹುದು. ವಿಮಾನ ಮತ್ತು ರೈಲು ಪ್ರಯಾಣಿಕರು ಸ್ವಯಂ ದೃಢೀಕರಣ ಮೂಲಕ ಪ್ರಯಾಣಿಸಬಹುದಾಗಿದೆ ಎಂದು ನ್ಯಾಯಪೀಠಕ್ಕೆ ಸ್ಪಷ್ಟನೆ ನೀಡಿದರು.