ಬೆಂಗಳೂರು: ಕೆಟ್ಟ ರೆಕಾರ್ಡ್, ಕ್ರಿಮಿನಲ್ ಹಿನ್ನೆಲೆ, ಭ್ರಷ್ಟಾಚಾರಿಗಳಿಗೆ ಆಮ್ ಆದ್ಮಿ ಪಕ್ಷದಲ್ಲಿ ಜಾಗವಿರುವುದಿಲ್ಲ. ಫ್ಯಾಮಿಲಿ ಪೊಲಿಟಿಕ್ಸ್ಗೂ ಅವಕಾಶವಿರದು ಎಂದು ರಾಜ್ಯದ ಆಮ್ ಆದ್ಮಿ ಪಕ್ಷದ ಮುಖಂಡ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ಪೊಲೀಸ್ ಅಧಿಕಾರಿಯಾಗಿ ಸ್ವಯಂನಿವೃತ್ತಿ ತೆಗೆದುಕೊಂಡ ಬಳಿಕ ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಾಯಕತ್ವದಲ್ಲಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ಸೇರಿದ್ದರು. ಭಾಸ್ಕರ್ ರಾವ್ 'ಈಟಿವಿ ಭಾರತ' ಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕಲುಷಿತಗೊಂಡಿರುವ ರಾಜಕೀಯವನ್ನು ಆಪ್ ಸ್ವಚ್ಚಗೊಳಿಸಲಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ 224 ವಿಧಾನಸಭೆಯ ಕ್ಷೇತ್ರಗಳಿಗೆ ಆಪ್ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಹೊಸಬರಿಗೆ, ಯುವಕರಿಗೆ, ಮೊದಲ ಸಲ ಚುನಾವಣೆಗೆ ಸ್ಪರ್ಧಿಸುತ್ತಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಲ್ಲದೇ ಕಾಂಗ್ರೆಸ್, ಬಿಜೆಪಿಗೆ ಆಮ್ ಆದ್ಮಿಯೇ ಪರ್ಯಾಯ ರಾಜಕೀಯ ಪಕ್ಷ ಎಂದರು.
ರಾಜ್ಯದಲ್ಲಿ ನೆಲೆಯೇ ಇಲ್ಲದ ಪಕ್ಷ ಸೇರಿದ್ದೀರಲ್ಲಾ?: ನೆಲೆಯೇ ಇಲ್ಲ ಅನ್ನುವುದು ಅಷ್ಟು ಸೂಕ್ತವಲ್ಲ. ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಯ ಚುನಾಯಿತ ಅಭ್ಯರ್ಥಿಗಳು ಯಾರೂ ಇಲ್ಲ. ಅದಕ್ಕೆ ನೆಲೆ ಇಲ್ಲ ಅಂತ ಭಾವಿಸುವುದು ಸರಿಯಲ್ಲ. ನಮ್ಮ ನಾಯಕರಾದ ಅರವಿಂದ ಕೇಜ್ರಿವಾಲ್ ಅವರು ಉತ್ತಮ ರಾಜಕಾರಣಿ. ಅವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಅವರ ದೆಹಲಿ ಅಧಿಕಾರ ನೋಡಿ, ಜನರು ಪಂಜಾಬ್ನಲ್ಲಿ ಅಧಿಕಾರ ನೀಡಿದ್ದಾರೆ.
ನೀವು ಬಿಜೆಪಿ, ಕಾಂಗ್ರೆಸ್ ಪಕ್ಷ ಸೇರುತ್ತೀರಿ ಎನ್ನುವ ಮಾತುಗಳಿದ್ದವು: ಎರಡೂ ಪಕ್ಷಗಳಲ್ಲಿ ನನಗೆ ಉತ್ತಮ ಸ್ನೇಹಿತರಿದ್ದಾರೆ. ಬಿಜೆಪಿ ಸೇರಿ ರಾಜ್ಯಸಭೆ ಸದಸ್ಯ ಅಥವಾ ಎಂಎಲ್ಸಿ ಆಗಬಹುದಿತ್ತು. ಆದರೆ ಎರಡೂ ಪಕ್ಷಗಳ ಬ್ಯಾಗೇಜ್ ಹೊರಲು ನನಗಿಷ್ಟ ಇರಲಿಲ್ಲ. ಮೇಲಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ದೂರದೃಷ್ಟಿಯೇ ಇಲ್ಲ. ನಾನು ರಾಜಕೀಯ ನೌಕರಿ ಹುಡುಕಲು ಬಂದಿಲ್ಲ. ಜೀವನದಲ್ಲಿ ಬದಲಾವಣೆ, ಚಾಲೆಂಜ್ ಇರಬೇಕು. ಆ ಎರಡೂ ಪಕ್ಷಗಳು ಯುವಕರನ್ನು ಹಾದಿ ತಪ್ಪಿಸುತ್ತಿವೆ. ಹಾಗಾಗಿ ನನಗೆ ಈ ಪಕ್ಷಕ್ಕೆ ಬರಬಹುದು ಅನ್ನಿಸಿತು. ಅಲ್ಲದೇ ಪಕ್ಷ ಕಟ್ಟೋದು ಚಾಲೆಂಜಿಂಗ್ ಎಂದು ಬಂದಿರುವೆ. ಒಂದು ವೇಳೆ ಆ ಪಕ್ಷಗಳಿಗೆ ಸೇರಿದ್ರೆ, ಎಲ್ಲಾದಕ್ಕೂ ನಿರ್ಬಂಧ ಇರುತ್ತಿತ್ತು. ಎರಡೂ ಪಕ್ಷಗಳೂ ಭವಿಷ್ಯದ ಬಗ್ಗೆ ಮಾತನಾಡಲ್ಲ. ಹಾಗಾಗಿ ಈ ಪಕ್ಷ ಸೇರಿದ್ದೇನೆ.
ಬಿಜೆಪಿ, ಕಾಂಗ್ರೆಸ್ಗಿಂತ ಆಪ್ ಪಾರ್ಟಿಯೇ ಏಕೆ ಸೂಕ್ತ ಅನ್ನಿಸಿತು: ಆಪ್ ಈಗಾಗಲೇ ದೆಹಲಿಯಲ್ಲಿ ಉತ್ತಮ ಆಡಳಿತ ನೀಡಿದೆ. ಪಂಜಾಬ್ನಲ್ಲಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳಿಗಿಂತ ಆಮ್ ಆದ್ಮಿ ವಿಭಿನ್ನವಾಗಿದೆ. ಮುಕ್ತ ವಾತಾವರಣ ಇದೆ. ಹಾಗಾಗಿ ನನಗೆ ಆಪ್ ಹೆಚ್ಚು ಸೂಕ್ತವೆನಿಸಿತು.
ಕರ್ನಾಟಕದಲ್ಲಿ ಆಪ್ ಪಾರ್ಟಿ ಪ್ರಯೋಗ ಯಶಸ್ವಿ ಆಗಲಿದೆಯಾ?: ಖಂಡಿತ ಯಶಸ್ವಿ ಆಗಲಿದೆ. ಆಪ್ ಬಗ್ಗೆ ರಾಜ್ಯದ ಜನ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕರ್ನಾಟಕ ರಾಜಕೀಯವಾಗಿ ಉತ್ತಮ ಪ್ರಯೋಗಶಾಲೆ. ಕನ್ನಡಿಗರು ತುಂಬಾ ಬುದ್ಧಿವಂತರು, ಅವರು ಅಭ್ಯರ್ಥಿಗಳನ್ನು ನೋಡಿ ಮತ ನೀಡಲಿದ್ದಾರೆ. ಸದ್ಯ ಜನರು ಮತ್ತು ಸರ್ಕಾರದ ನಡುವಿನ ಸಂಪರ್ಕ ದಿನೇ ದಿನೇ ಕಡಿಮೆಯಾಗುತ್ತಿದೆ.
ರಾಜ್ಯದಲ್ಲಿ 224 ಕ್ಷೇತ್ರಗಳಿಗೆ ಸ್ಪರ್ಧಿಸಲು ಆಪ್‌ನಲ್ಲಿ ಅಭ್ಯರ್ಥಿಗಳಿದ್ದಾರಾ? : ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಾಗುತ್ತದೆ. ಬಹಳಷ್ಟು ಜನ ಆಪ್ ಸೇರಿ ಅಭ್ಯರ್ಥಿಗಳಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಎರಡು ವಾರದಲ್ಲಿ 60 ರಿಂದ 70 ಕ್ಷೇತ್ರಕ್ಕೆ ಅಭ್ಯರ್ಥಿಗಳು ತಯಾರಾಗಿದ್ದಾರೆ. ಜನರು ಎರಡೂ ರಾಷ್ಟ್ರೀಯ ಪಕ್ಷಗಳಿಂದ ರೋಸಿ ಹೋಗಿದ್ದಾರೆ. ಹಾಗಾಗಿ ನಮ್ಮ ಪಕ್ಷಕ್ಕೆ ಅಧಿಕಾರ ನೀಡುವ ನಂಬಿಕೆ ಇದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಆಪ್ ಅಲೆ ಎಲ್ಲಿದೆ?: ರಾಜ್ಯದಲ್ಲಿ ಮೊದಲು ಪಕ್ಷದ ಸಂಘಟನೆ ಮಾಡಲಾಗುತ್ತದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಸದಸ್ಯತ್ವ ಅಭಿಯಾನ ನಡೆಸಲಾಗುತ್ತದೆ. ಜನ ಹೆಚ್ಚು ಹೆಚ್ಚು ಆಪ್ ಕಡೆ ವಾಲಿದಂತೆ ಅಲೆ ಸೃಷ್ಟಿಯಾಗಲಿದೆ. ನಾನು ಉತ್ತರ ಕರ್ನಾಟಕ್ಕೆ ಹೋದಾಗ ಅಲ್ಲಿನ ಮಹಿಳೆಯರು ದೆಹಲಿ ರೀತಿಯ ಶಾಲೆ ಯಾವಾಗ ಪ್ರಾರಂಭ ಮಾಡುತ್ತೀರಾ? ಎಂದು ಪ್ರಶ್ನಿಸಿದ್ರು. ಇದನ್ನು ಕೇಳಿ ನನಗೆ ಆಶ್ಚರ್ಯ ಆಯಿತು. ಇದರಿಂದ ರಾಜ್ಯದಲ್ಲಿ ಆಪ್ ಅಲೆ ಇದೆ ಅನ್ನೋದು ತಿಳಿಯುತ್ತದೆ.
ಆಪ್‌ನಲ್ಲಿ ನಿಮ್ಮ ಪಾತ್ರವೇನು? : ಪಕ್ಷ ಸಂಘಟನೆಗೆ ಮೊದಲ ಆದ್ಯತೆ. ಯಾವುದೇ ಕಂಡೀಶನ್ ಇಲ್ಲದೇ ಆಪ್ ಸೇರಿದ್ದೇನೆ. ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುವೆ. ನಮ್ಮ ಪಕ್ಷದಲ್ಲಿ ನಮ್ಮ ಕೆಲಸ ನೋಡಿ ಜವಾಬ್ದಾರಿ ನೀಡುತ್ತಾರೆ. ಹಾಗಾಗಿ ನಾನು ಇಂತದ್ದೇ ಕೆಲಸ ಕೊಡಿ ಎಂದು ಕೇಳುವುದಿಲ್ಲ. ನನ್ನ ಸ್ನೇಹಿತರು, ಸಂಬಂಧಿಕರು ಪರಿಚಯದವರನ್ನು ಸೇರಿಸಿಕೊಂಡು ಪಕ್ಷ ಕಟ್ಟುವೆ. ನಾನು ನಮ್ಮ ಪಕ್ಷದ ಕಾಮನ್‌ಮ್ಯಾನ್. ಜನ ಒಳ್ಳೆಯವರಿದ್ದಾರೆ, ನಮ್ಮನ್ನು ಗೆಲ್ಲಿಸುತ್ತಾರೆ.
ಚುನಾವಣೆಯಲ್ಲಿ ಎಂತಹ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುತ್ತೀರಿ?: ಹೊಸಬರಿಗೆ ಹೆಚ್ಚಿನ ಆದ್ಯತೆ ಇರಲಿದೆ. ಕೆಟ್ಟ ರೆಕಾರ್ಡ್ ಇದ್ದವರಿಗೆ, ಭ್ರಷ್ಟಾಚಾರಿಗಳಿಗೆ ಟಿಕೆಟ್ ನೀಡಲಾಗುವುದಿಲ್ಲ, ಪಕ್ಷಕ್ಕೂ ಸೇರಿಸಿಕೊಳ್ಳಲಾಗುವುದಿಲ್ಲ. ನಮ್ಮ ರಾಷ್ಟ್ರ ನಾಯಕರು ಪ್ರಾಮಾಣಿಕವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಾರೆ. ನಾವು ಇದರಲ್ಲಿ ಭಾಗಿಯಾಗುವುದಿಲ್ಲ. ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ನಾವು ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ.
ನೀವು ಸ್ಪರ್ಧೆ ಮಾಡುತ್ತೀರಾ? ಯಾವ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತೀರಿ?: ಖಂಡಿತ ಚುನಾವಣೆಗೆ ಸ್ಪರ್ಧಿಸುತ್ತೇನೆ. ಕ್ಷೇತ್ರದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಬಸವನಗುಡಿ, ಜಯನಗರ, ಮಲ್ಲೇಶ್ವರ ಕ್ಷೇತ್ರಗಳಲ್ಲಿ ನನಗೆ ಉತ್ತಮ ಒಡನಾಟ ಇದೆ. ಇದಕ್ಕಿನ್ನೂ ಬಹಳ ಸಮಯ ಇದೆ, ನೋಡೋಣ.
ಅಧಿಕಾರಿ ವರ್ಗದವರು ರಾಜ್ಯ ರಾಜಕೀಯದಲ್ಲಿ ಯಶಸ್ಸು ಕಂಡಿಲ್ಲವಲ್ಲ?: ಉತ್ತಮ ಪ್ರಶ್ನೆ. ಅಧಿಕಾರ ಮನೋಭಾವ ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಿದರೆ ಯಶಸ್ಸಿನ ಸಾಧ್ಯತೆ ಇದೆ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಾಜಕಾರಣನೇ ಬೇರೆ, ಅಧಿಕಾರಶಾಹಿನೇ ಬೇರೆ. ಇದನ್ನು ನಡೆಸೋಕೆ ಹೋದ್ರೆ, ಜನ ಒಪ್ಪಲ್ಲ. ನಾನು ಅಧಿಕಾರ ಸಾಕು ಎಂದು ಹೊರಗಡೆ ಬಂದಿದ್ದೇನೆ. ನಾನು ಜನರ ಜೊತೆಗಿರಲು ಸಿದ್ಧವಾಗಿದ್ದೇನೆ ಎಂದು ಆಪ್ ಮುಖಂಡ ಭಾಸ್ಕರ್ ರಾವ್ ಹೇಳಿದರು.