ಬೆಂಗಳೂರು: ಕಡಿಮೆ ಗುಣಮಟ್ಟದ ಅಡಕೆ ಹಾಗೂ ಕಾಳುಮೆಣಸನ್ನು ವಿದೇಶಗಳಿಂದ ಆಮದು ಮಾಡಿಕೊಂಡು ನಮ್ಮ ಅಡಕೆ ಬೆಳೆಗಾರರ ಭವಿಷ್ಯದ ಜೊತೆ ಚೆಲ್ಲಾಟವಾಡುವ ಮೋದಿ ಸರ್ಕಾರದ ನಿರ್ಧಾರಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖಂಡ ಬ್ರಿಜೇಶ್ ಕಾಳಪ್ಪ ಅವರು, ಕರ್ನಾಟಕವು ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಅಡಕೆ ಹಾಗೂ ಕಾಳುಮೆಣಸು ಬೆಳೆಯುತ್ತಿದೆ. ಆದರೆ, ಕೇಂದ್ರ ಸರ್ಕಾರವು ಭೂತಾನ್ನಿಂದ 17 ಸಾವಿರ ಕ್ವಿಂಟಾಲ್ ಅಡಕೆಯನ್ನು ಹಾಗೂ ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲು ಮುಂದಾಗಿದೆ.
ಅವು ಕಡಿಮೆ ಗುಣಮಟ್ಟದ್ದಾಗಿದ್ದು, ಇಲ್ಲಿನ ಉತ್ತಮ ಗುಣಮಟ್ಟದ ಬೆಳೆಗಳೊಂದಿಗೆ ಮಿಶ್ರವಾಗುವುದರಿಂದ ಸ್ವದೇಶಿ ಅಡಕೆ ಹಾಗೂ ಕಾಳುಮೆಣಸಿನ ಬಗ್ಗೆ ಗ್ರಾಹಕರಲ್ಲಿ ತಪ್ಪು ಕಲ್ಪನೆ ಮೂಡಲಿದ ಎಂದು ಹೇಳಿದರು.
ಅಗತ್ಯದಷ್ಟು ಇಲ್ಲೆ ಉತ್ಪಾದನೆ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯ ರೈತರು ಬೆಳೆದ ಅಡಕೆ ಹಾಗೂ ಕಾಳುಮೆಣಸಿಗೆ ಬೇಡಿಕೆ ಕಡಿಮೆಯಾಗಲಿದೆ. ರೈತರಿಗೆ ಸಿಗುವ ಬೆಲೆಯ ಮೇಲೆ ಇದು ಕೆಟ್ಟ ಪರಿಣಾಮ ಬೀರಲಿದೆ. ಭಾರತಕ್ಕೆ ಅಗತ್ಯವಿರುವಷ್ಟು ಅಡಕೆ ಹಾಗೂ ಕಾಳುಮೆಣಸನ್ನು ನಮ್ಮ ರೈತರೇ ಉತ್ಪಾದಿಸುವಾಗ ಆಮದು ಮಾಡಿಕೊಳ್ಳುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.
ರೈತರಿಗೆ ಕೆಜಿಯ ಮೇಲೆ 350 ರೂ ನಷ್ಟ : ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಕಾಳು ಮೆಣಸು ಬೆಳೆಸುತ್ತಾರೆ. ಕಾಳಮೆಣಸು ಸುಮಾರು 2021 ರಲ್ಲಿ 36 ಸಾವಿರ ಮೆಟ್ರಿಕ್ ಟನ್ ಉತ್ಪನ್ನವಾಯಿತು. ಮೊದಲು ಪ್ರತಿ ಕ್ವಿಂಟಾಲ್ ಕಾಳುಮೆಣಸಿಗೆ 85000 ರೂ. ಇತ್ತು. ಈಗ ಪ್ರತಿ ಕೆ ಜಿಗೆ 500 ರೂ.ಆಗಿದೆ. ಬೆಲೆ ಕುಸಿದಿರುವುದರಿಂದ ಸುಮಾರು 350 ರೂ. ನಷ್ಟವಾಗಿದೆ. ನಮ್ಮ ರಾಜ್ಯದ ಬೆಳೆಗಾರರಿಗೆ 1 ಲಕ್ಷ 26 ಸಾವಿರ ಕೋಟಿ ರೂ. ಪ್ರತಿ ವರ್ಷ ನಷ್ಟವಾಗುತ್ತಿದೆ ಎಂದು ಹೇಳಿದರು.
ರೈತರಿಗೆ ನೆರವಾಗಬೇಕಾದ ಸರ್ಕಾರವು ಅಡಕೆಯನ್ನು ಅಮದು ಮಾಡಿಕೊಳ್ಳುವ ಮೂಲಕ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದು ಅಮಾನವೀಯ ನಡೆ. ಈ ಬಗ್ಗೆ ಪ್ರಧಾನಿಗಳಿಗೆ ಹಾಗೂ ಕೇಂದ್ರದ ವಾಣಿಜ್ಯ ಖಾತೆ ಸಚಿವರಿಗೆ ಪತ್ರ ಬರೆಯಲಾಗಿದೆ. ಜೊತೆಗೆ ಸದ್ಯದಲ್ಲೇ ತಮ್ಮ ಪಕ್ಷದಿಂದ ನಿಯೋಗ ಕೊಂಡೊಯ್ದು ಕೇಂದ್ರ ವಾಣಿಜ್ಯ ಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿವುದು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ತಗ್ಗಿಸಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ