ಬೆಂಗಳೂರು: ನ್ಯಾಯಾಂಗದ ಇತ್ತೀಚಿನ ಜನಪರ ನಿಲುವುಗಳಿಂದ ವಕೀಲ ಸಮುದಾಯದ ಕುರಿತು ಮುಖ್ಯಮಂತ್ರಿಗಳಿಗೆ ತಾತ್ಸಾರ ಭಾವನೆ ಮೂಡಿರುವಂತಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ಕೊರೊನಾ ಲಾಕ್‌ಡೌನ್ ಪರಿಣಾಮ ವಕೀಲ ಸಮುದಾಯಕ್ಕೆ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ನೀಡುತ್ತಾರೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಸಿಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ರಂಗನಾಥ್, ಸರ್ಕಾರ ಕೂಡಲೇ ವಕೀಲರ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಕೊರೊನಾ ಹೋರಾಟದಲ್ಲಿ ವಕೀಲರನ್ನೂ ಮುಂಚೂಣಿ ವಾರಿಯರ್ಸ್ ಎಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ 30 ಲಕ್ಷ ಪರಿಹಾರ ನೀಡಬೇಕೆಂದು ಬೆಂಗಳೂರು ವಕೀಲರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೇ ಕಳೆದ ವರ್ಷದ ಲಾಕ್ಡೌನ್ನಿಂದಾಗಿ ನ್ಯಾಯಾಲಯದ ಕಲಾಪಗಳು ನಡೆಯದ ಕಾರಣ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಪ್ಯಾಕೇಜ್ ಘೋಷಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡಿಲ್ಲ ಎಂದು ಆಪಾದಿಸಿದ್ದಾರೆ.
ಈಗ ಮತ್ತೊಂದು ಅವಧಿಯ ಲಾಕ್‌ಡೌನ್ ಪ್ರಕಟಿಸಿರುವ ಬೆನ್ನಲ್ಲೇ ವಕೀಲರು ಪ್ರತಿದಿನ ಸೋಂಕಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಹೀಗಿದ್ದೂ, ಸರ್ಕಾರ ವಕೀಲರ ನೆರವಿಗೆ ಧಾವಿಸುತ್ತಿಲ್ಲ. ಬಹುಶಃ ನ್ಯಾಯಾಂಗದ ಇತ್ತೀಚಿನ ಜನಪರ ನಿಲುವುಗಳಿಂದ ಸರ್ಕಾರಕ್ಕೆ ವಕೀಲ ಸಮುದಾಯದ ಕುರಿತು ತಾತ್ಸಾರ ಭಾವನೆ ಮೂಡಿರುವಂತಿದೆ. ಹೀಗಾಗಿ, ಸರ್ಕಾರ ತಕ್ಷಣವೇ ವಕೀಲರ ಸಂಘದ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಎಬಿ ಅಧ್ಯಕ್ಷ ರಂಗನಾಥ್ ಆಗ್ರಹಿಸಿದ್ದಾರೆ.