ಬೆಂಗಳೂರು: ಜೀವನ ಅಂದ್ರೆ ಏನು ಅಂತ ಕೇಳಿದ್ರೆ, ಕೆಲವರು Life is full of problems and Pain ಎನ್ನುತ್ತಾರೆ. ಇನ್ನೂ ಕೆಲವರು Life is full of surprises and miracles ಅಂತಾ ಹೇಳುತ್ತಾರೆ. ಸಣ್ಣ ಘಟನೆ ನಡೆದು ಮಂಕಾಗುವವರ ಮಧ್ಯೆ ದೊಡ್ಡ ಅಪಘಾತವಾಗಿ ಓಡಾಡಲು ಆಗದ ಸ್ಥಿತಿ ಎದುರಾದರೂ ಅದನ್ನ ಬದಿಗಿಟ್ಟು ಹೊಸ ಬದುಕನ್ನ ಕಟ್ಟಿಕೊಳ್ಳುವವರು ಇದ್ದಾರೆ. ಬದುಕಿನ ಬಣ್ಣ ಬದಲಾದರೂ ಅದೇ ರಂಗು ರಂಗೀನ ಬಣ್ಣಗಳಿಂದ ಬದುಕು ಕಟ್ಟಿಕೊಂಡು ಮತ್ತೊಬ್ಬರಿಗೂ ಸ್ಫೂರ್ತಿಯಾದ ಮಹಿಳೆಯ ಕಥೆಯನ್ನ 'ಈಟಿವಿ ಭಾರತ'ವು ವಿಶ್ವ ಮಹಿಳೆಯರ ದಿನದ ಅಂಗವಾಗಿ ಅನಾವರಣಗೊಳಿಸುತ್ತಿದೆ.
ಬದುಕು ಬದಲಿಸಿದ ಬಣ್ಣಗಳು.. ವ್ಹೀಲ್ ಚೇರ್ನಲ್ಲಿ ಕುಳಿತಿರುವ ಇವರ ಹೆಸರು ಶ್ರಾವಣಿ ರಾಮಚಂದ್ರನ್, ವೃತ್ತಿಯಲ್ಲಿ ಐಬಿಎಂ ಉದ್ಯೋಗಿಯಾಗಿದ್ದು, ಜೊತೆಗೆ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಚಿತ್ರ ಕಲಾವಿದೆಯೂ ಹೌದು. ಅಂದಹಾಗೆ, ಶ್ರಾವಣಿ ಆರ್ಟಿಸ್ಟ್ ಆಗಿದ್ದೇ ಒಂದು ರೋಚಕ.
12 ವರ್ಷಗಳ ಹಿಂದೆ ಕಚೇರಿಗೆ ಹೋಗುವಾಗ ವಾಹನ ಅಪಘಾತದಲ್ಲಿ ತಮ್ಮ ಸ್ಪೈನಲ್ ಕಾರ್ಡ್ ಕಳೆದುಕೊಂಡರು. ಪರಿಣಾಮ ಅವರು ವ್ಹೀಲ್ ಚೇರ್ನಲ್ಲೇ ಕೂರುವಂತೆ ಆಯಿತು. ಬರೋಬ್ಬರಿ ಆರು ತಿಂಗಳು ಏನೆಲ್ಲಾ ನಡೆಯಿತು ಎಂಬುದನ್ನು ನೆನಪಿಲ್ಲದಂತೆ ಮಾಡ್ತು ಆ ಒಂದು ಅಪಘಾತ. ಎಲ್ಲೂ ಓಡಾಡಲು ಆಗದ ಪರಿಸ್ಥಿತಿ ಎದುರಾದಾಗ ಚಿತ್ರ ಬಿಡಿಸಲು ಶುರು ಮಾಡಿದ ಅವರು ನಂತರ ಬಣ್ಣಗಳೊಂದಿಗೆ ಒಡನಾಟ ಶುರು ಮಾಡಿದರು.
ಇದನ್ನೂ ಓದಿ: ವಕ್ಫ್, ದೇವಸ್ಥಾನಗಳ ಆಸ್ತಿ ದುರ್ಬಳಕೆ ತಡೆಯಲು ಸರ್ವೇ : ಸಚಿವೆ ಜೊಲ್ಲೆ
ದೈಹಿಕ ನ್ಯೂನತೆಉಳ್ಳವರ ಬಾಳಿಗೆ ಆಶಾಕಿರಣ.. ಮಹಿಳೆಯರನ್ನು ಸೇರಿಸಿಕೊಂಡು ಪ್ರಗತಿ ಎಂಬ ತಂಡ ಕಟ್ಟಿರುವ ಶ್ರಾವಣಿ, ತಮ್ಮಂತೆ ಅಂಗ ವೈಕಲ್ಯ ಹೊಂದಿರುವ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಕೆಲಸವನ್ನ ಮಾಡುತ್ತಿದ್ದಾರೆ.
ಅಂಗವೈಕಲ್ಯತೆಯನ್ನ ಪಕ್ಕಕ್ಕಿಟ್ಟು ನಮ್ಮೊಳಗಿನ ಸಾಮರ್ಥ್ಯದಿಂದ ಏನೆಲ್ಲ ಮಾಡಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಎಲೆಮರೆಯ ಕಾಯಿಯಂತೆ ಬೆಳೆಯುತ್ತಿರುವ ಶ್ರಾವಣಿ ಅದೆಷ್ಟೋ ಹೆಣ್ಣು ಮಕ್ಕಳಿಗೆ, ದೈಹಿಕ ನ್ಯೂನತೆಯುಳ್ಳವರಿಗೆ ಸ್ಫೂರ್ತಿಯಾಗಿದ್ದಾರೆ.