ಬೆಂಗಳೂರು: ಸತತ 30 ವರ್ಷಗಳ ಕಾಲ ಕಷ್ಟುಪಟ್ಟು ದುಡಿದು ಉಳಿತಾಯ ಮಾಡಿದ್ದ ಹಣ ಅದು. ಜೀವನದ ಸಂಧ್ಯಾಕಾಲದಲ್ಲಿ ಸಂಪಾದಿಸಿದ್ದ ಹಣದೊಂದಿಗೆ ಆರಾಮಾಗಿ ಕಾಲ ಕಳೆಯಬೇಕಾಗಿದ್ದ 71 ವರ್ಷದ ವೃದ್ಧ ಪೊಲೀಸ್ ಮೆಟ್ಟಿಲೇರಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ವೃದ್ಧರ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಮಾಡಿಸಿಕೊಂಡು 20 ಲಕ್ಷ ರೂಪಾಯಿ ಲಪಾಟಿಸಿರುವುದು ಬೆಳಕಿಗೆ ಬಂದಿದೆ.
ಮತ್ತಿಕೆರೆ ನಿವಾಸಿ ನರಸಿಂಹಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಬಿಇಎಲ್‌ನಲ್ಲಿ ಕೆಲಸ ಮಾಡಿ 2010ರಲ್ಲಿ ನಿವೃತ್ತಿ ಹೊಂದಿದ್ದರು. ತಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಯಲ್ಲಿ 15 ಲಕ್ಷ ರೂ.ಹಣವಿತ್ತು. ಇದೇ ಪಿಎಫ್ ಖಾತೆಯಲ್ಲಿ ಇಂಟರೆಸ್ಟ್ ಡಿವಿಡೆಂಡ್ ಸ್ಕೀಂ ನಲ್ಲಿ ತೊಡಗಿಸಿಕೊಂಡರೆ ಮೂರು ವರ್ಷದ ಬಳಿಕ 20 ಲಕ್ಷ ರೂಪಾಯಿ ಸಿಗುವ ಭರವಸೆ ನೀಡಿದ್ದರಿಂದ ನರಸಿಂಹಯ್ಯ ಹೂಡಿಕೆ ಮಾಡಿದ್ದರು.
ಅನಾರೋಗ್ಯ ಕಾರಣದಿಂದ ಇದುವರೆಗೂ ಪಿಎಫ್ ಹಣ ಬಿಡಿಸಿಕೊಂಡಿರಲಿಲ್ಲ. ಹಣ ಬಿಡಿಸಿಕೊಳ್ಳಲು ಕಂಪನಿಯ ಪಿಎಫ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದಾಗ ಇವರ ಹೆಸರಿನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ಹಣ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಫಲಾನುಭವಿ ಹೆಸರಿನಲ್ಲಿ 20 ಲಕ್ಷ ಹಣ ಡ್ರಾ:
ಬಿಇಎಲ್ ಕಂಪೆನಿಯ ನಿವೃತ್ತ ನೌಕರ ನರಸಿಂಹಯ್ಯ ಹೆಸರಿನಲ್ಲಿ ಮತ್ತಿಕೆರೆಯ ಅಫೆಕ್ಸ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಇದನ್ನು ಅರಿತಿದ್ದ ಅಪರಿಚಿತ ವಂಚಕ ವೃದ್ಧರ ಹೆಸರಿನಲ್ಲಿ ನಕಲಿ ಉಳಿತಾಯ ತೆರೆದಿದ್ದಾನೆ. ನರಸಿಂಹಯ್ಯ ಹೆಸರಿನಲ್ಲಿ ಆಧಾರ್ ಕಾರ್ಡ್ ನಕಲಿ ಮಾಡಿಸಿಕೊಂಡು ಬ್ಯಾಂಕಿಗೆ ನೀಡಿ ಪಿಎಫ್ ಖಾತೆಯಲ್ಲಿದ್ದ 20 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
20 ಲಕ್ಷ ಕದ್ದವನ ಖಾತೆಯಲ್ಲಿ ಇರೋದು ಬರೀ 1500:
ಪ್ರಕರಣ ದಾಖಲಿಸಿಕೊಂಡ ಜಾಲಹಳ್ಳಿ ಪೊಲೀಸರು ಅಫೆಕ್ಸ್ ಬ್ಯಾಂಕ್ ಹೋಗಿ ಮಾಹಿತಿ ಪಡೆದಿದ್ದಾರೆ. ನರಸಿಂಹಯ್ಯ ಹೆಸರಿನಲ್ಲಿ ಸೃಷ್ಟಿಸಿದ್ದ ಖಾತೆಯಿಂದ ಆರೋಪಿ ಖಾತೆಗೆ ಪರಿಶೀಲಿಸಿದಾಗ 20 ಲಕ್ಷ ಹಣ ವಿತ್ ಡ್ರಾ ಮಾಡಿಕೊಂಡಿದ್ದು ,ಆತನ ಖಾತೆಯಲ್ಲಿ ಈಗ 1500 ರೂಪಾಯಿ ಮಾತ್ರ ಇರುವುದು ಗೊತ್ತಾಗಿದೆ. ನಗರದ ವಿವಿಧ ಎಟಿಎಂಗಳಿಂದ ಹಣ ಬಿಡಿಸಿಕೊಂಡಿದ್ದಾನೆ. ಸದ್ಯ ಆರೋಪಿ ಸುಳಿವು ದೊರೆತಿದ್ದು ಶೀಘ್ರದಲ್ಲಿ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.