ಬೆಂಗಳೂರು: ಚಿನ್ನದ ಗಟ್ಟಿಯನ್ನು ಆಭರಣವಾಗಿ ಪರಿವರ್ತಿಸಿ ಜ್ಯುವೆಲ್ಲರಿ ಶಾಪ್ಗೆ ತಂದುಕೊಡುತ್ತಿದ್ದ ಅಂಗಡಿಯೊಂದರಲ್ಲಿ ಕೆ.ಜಿಗಟ್ಟಲೆ ಚಿನ್ನ ಕದ್ದು ಮಾರಾಟ ಮಾಡುತ್ತಿದ್ದ ಕಳ್ಳನನ್ನು ನಂದಿನಿ ಲೇಔಟ್ ಪೊಲೀಸರು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಉತ್ತಮ್ ದೊಲಾಯಿ ಬಂಧಿತ ಆರೋಪಿಯಾಗಿದ್ದು, ಮೂಲತಃ ಪಶ್ಚಿಮ ಬಂಗಾಳದವನಾಗಿದ್ದಾನೆ. ಈತ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿ ಚಿನ್ನದ ಗಟ್ಟಿಯನ್ನು ಕರಗಿಸಿ ವಿವಿಧ ಬಗೆಯ ಆಭರಣಗಳನ್ನು ಡಿಸೈನ್ ಮಾಡುವ ಕೆಲಸ ಮಾಡುತ್ತಿದ್ದ. ಕಬ್ಬನ್ ಪೇಟೆಯ ಎಸ್.ಜೆ. ಜ್ಯುವೆಲ್ಲರಿ ಶಾಪ್ಗೆ ಮೂರು ವರ್ಷಗಳಿಂದ ಚಿನ್ನದ ಗಟ್ಟಿ ಪಡೆದುಕೊಂಡು ಆಭರಣವಾಗಿ ಪರಿವರ್ತಿಸಿ ಚಿನ್ನಾಭರಣ ನೀಡುವ ಕೆಲಸ ಮಾಡುತ್ತಿದ್ದ.
ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉತ್ತಮ್ ದೊಲಾಯಿ ಮೇಲೆ ಜ್ಯವೆಲ್ಲರಿ ಶಾಪ್ ಮಾಲೀಕನಿಗೆ ನಂಬಿಕೆ ಇತ್ತು. ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಂಡ ಆರೋಪಿ, ಹಂತ ಹಂತವಾಗಿ ಅಂಗಡಿಯಲ್ಲಿ ಚಿನ್ನ ಕದ್ದಿದ್ದಾನೆ. ಹೀಗೆ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಕದ್ದ ಚಿನ್ನವನ್ನು ಆರೋಪಿ ಕೆಲವು ಸಣ್ಣಪುಟ್ಟ ಚಿನ್ನದಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ. ಅದೇ ರೀತಿ ಮೇ 8ರಂದು ಕಂಠೀರವ ಸ್ಟುಡಿಯೋ ಬಳಿ ಜ್ಯುವೆಲ್ಲರಿ ಶಾಪ್ಗೆ ಮಾರಾಟ ಮಾಡಲು ಮುಂದಾಗಿದ್ದಾನೆ. ಈತನ ಅನುಮಾನಾಸ್ಪದ ನಡೆ ಕಂಡು ಪೊಲೀಸರು ಶಂಕೆ ವ್ಯಕ್ತಪಡಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಕೃತ್ಯ ಬಾಯ್ಬಿಟ್ಟಿದ್ದಾನೆ.
ಬಂಧಿತ ಆರೋಪಿಯಿಂದ 45 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.