ಬೆಂಗಳೂರು: ಲಾಕ್ಡೌನ್ನಿಂದ ಯಾವುದೇ ಆಹಾರ ಸಿಗದೆ ಬಳಲುತ್ತಿರುವ ಬೀದಿ ನಾಯಿಗಳ ಪಾಲಿಗೆ ಅನ್ನಪೂರ್ಣೇಶ್ವರಿಯಾಗಿದ್ದಾರೆ ನಗರ ಟೆಕ್ಕಿಯೊಬ್ಬರು. ಸುಮಾರು 1200ಕ್ಕೂ ಹೆಚ್ಚು ಶ್ವಾನಗಳ ಹಸಿವು ನೀಗಿಸುತ್ತಿದ್ದಾರೆ ಹ್ಯಾಪಿ ಪಾವ್ಸ್ ಫೌಂಡೇಷನ್ ಸಂಸ್ಥೆಯಾಗಿರುವ ರೇಖಾ ಪ್ರಸಾದ್.
ನಗರದ ಎನ್ಆರ್ ಕಾಲೋನಿ ನಿವಾಸಿಯಾರುವ ರೇಖಾ ಪ್ರಸಾದ್ ಅವರು ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು,ಹ್ಯಾಪಿ ಪಾವ್ಸ್ ಫೌಂಡೇಷನ್ ಸಂಸ್ಥೆ ಮುಖ್ಯಸ್ಥೆಯೂ ಆಗಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಇವರು, ರೋಗ ರುಜಿನಗಳಿಂದ ಬಳಲುತ್ತಿರುವ ಶ್ವಾನಗಳು ಸೇರಿದಂತೆ ಬೀದಿ ನಾಯಿಗಳ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರಕ್ಕಾಗಿ ಬೀದಿ ನಾಯಿಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಇದನ್ನರಿತ ರೇಖಾ, ಯಾರ ಸಹಾಯವಿಲ್ಲದೆ ಸಾವಿರಾರು ಬೀದಿ ನಾಯಿಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಬಸವನಗುಡಿ, ಎನ್.ಆರ್. ಕಾಲೋನಿ, ಹನುಮಂತನಗರ, ಸೀತಾ ಸರ್ಕಲ್, ಪದ್ಮನಾಭ ನಗರ, ಬನಶಂಕರಿ, ತ್ಯಾಗರಾಜ ನಗರ, ಕೆ.ಆರ್. ಮಾರ್ಕೆಟ್, ಮೆಜೆಸಿಕ್ಟ್ ಸುತ್ತಮುತ್ತಲಿನ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.
ಇವರು ತಮ್ಮ ಮನೆಯಲ್ಲಿ ಶಿವಾ, ಮಿಕಿ ಬ್ರೂನ್, ಅಮ್ಮು ಬುರ್ಕಾ, ಫಿಕ್ಸಿ, ರೂಮಿ ಸೇರಿದಂತೆ 17 ಹೆಸರಿನ ಶ್ವಾನಗಳು, 12 ಬೆಕ್ಕು ಸೇರಿದಂತೆ ಒಟ್ಟು 28 ಪ್ರಾಣಿಗಳನ್ನು ಮಗುವಿನಂತೆ ಸಾಕಿದ್ದಾರೆ. ಮನೆಯಲ್ಲಿಯೇ ಪ್ರತಿದಿನ 75 ಕೆಜಿ ಅಕ್ಕಿ, 60 ಕೆಜಿ ಜನತಾ ಚಿಕನ್ ತರಿಸಿ ಬೀದಿ ನಾಯಿಗಳಿಗೆ ನೀಡುತ್ತಿದ್ದಾರೆ. ಇವರ ಕಾರ್ಯ ಗುರುತಿಸಿದ ಜನರು, ಇವರ ಮನೆಗೆ ಬಂದು ಆಹಾರ ತೆಗೆದುಕೊಂಡು ಹೋಗಿ ತಮ್ಮ ಏರಿಯಾದಲ್ಲಿರುವ ನಾಯಿಗಳಿಗೂ ಹಾಕುತ್ತಿದ್ದಾರೆ.
ಈ ಕುರಿತಂತೆ ಈಟಿವಿ ಭಾರತದ ಜೊತೆ ರೇಖಾ ಪ್ರಸಾದ್ ಮಾತನಾಡಿ, ಸಾವಿರಾರು ನಾಯಿಗಳಿಗೆ ಆಹಾರ ಒದಗಿಸಲು ದಿನಕ್ಕೆ ಸುಮಾರು 5 ಸಾವಿರ ರೂಪಾಯಿ ಖರ್ಚು ಆಗಲಿದೆ. ಒಂದೊತ್ತಿನ ಊಟಕ್ಕಾಗಿ 6-7 ರೂಪಾಯಿ ಖರ್ಚು ಬರುತ್ತೆ. ನಮ್ಮ ಕೆಲಸ ನೋಡಿ ಸಾರ್ವಜನಿಕರು ಧವಸ, ಧ್ಯಾನ ಹಾಗೂ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಲಾಕ್ಡೌನ್ ಮುಗಿಯುವವರೆಗೂ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.