ಬೆಂಗಳೂರು: ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಕಾರ್ಯದರ್ಶಿಗೆ ಶುಕ್ರವಾರ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದರು.
ಎ.ಟಿ.ರಾಮಸ್ವಾಮಿ ಬಿಜೆಪಿ ಸೇರ್ಪಡೆಗೊಳ್ಳುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಎ.ಟಿ.ರಾಮಸ್ವಾಮಿ ಅವರು, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಈ ಬಾರಿ ಜೆಡಿಎಸ್ ಅರಕಲಗೂಡು ಕ್ಷೇತ್ರದಲ್ಲಿ ಎ.ಮಂಜು ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಹಿಂದೆ ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ನಾನು ಇಂದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಶಾಸಕಾಂಗ ಪಕ್ಷದ ನಾಯಕರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಸ್ಪೀಕರ್ ಬಂದ ನಂತರ ಅವರನ್ನು ಭೇಟಿ ಆಗುತ್ತೇನೆ ಎಂದು ತಿಳಿಸಿದರು.
ವೈಯಕ್ತಿಕ ಲಾಭಕ್ಕಾಗಿ ಆಡಳಿತ ಮಾಡಿರಲಿಲ್ಲ: ಜೆಡಿಎಸ್‌ನವರು ನನಗೆ ಶಾಸಕನಾಗಿ ಕೆಲಸ ಮಾಡಲು ಅವಕಾಶ ನೀಡಿದ್ದರು. ನಾನೆಂದೂ ವೈಯಕ್ತಿಕ ಲಾಭಕ್ಕಾಗಿ ಆಡಳಿತ ಮಾಡಿರಲಿಲ್ಲ. ವಿಧಾನಸಭೆ ಒಳಗೆ ಮತ್ತು ಹೊರಗೆ ತಪ್ಪನ್ನು ನೇರವಾಗಿ ಮಾತನಾಡಿದ್ದೇನೆ. ನನ್ನ ವಿರೋಧಿಗಳು ಒಳ್ಳೆಯ ಆಶಯವನ್ನು ಹೊಂದಲಿ. ಎಲ್ಲರಿಗೂ ನನ್ನ ಧನ್ಯವಾದ ತಿಳಿಸುತ್ತೇನೆ. ನನಗೆ ಜನಸೇವೆಗಾಗಿ ಅವಕಾಶ ಸಿಕ್ಕಿತ್ತು. ಮುಂದೆ ಅವಕಾಶ ಸಿಕ್ಕಿದ್ರು ಅದನ್ನ ಜನಸೇವೆಗೆ ಮೀಸಲಿಡುತ್ತೇನೆ. ಕರ್ನಾಟಕ ರಾಜಕಾರಣ ಹಿಂದೆ ಬಹಳ ಚೆನ್ನಾಗಿತ್ತು, ಈಗ ಬಹಳ ಕೆಟ್ಟದಾಗಿದೆ. ಓಲೈಕೆ ರಾಜಕಾರಣ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜನರ ಹಿತಕ್ಕಾಗಿ ಕೆಲಸ ಮಾಡಿರುವೆ: ಎಂದಿಗೂ ನಾನು ಕೆಟ್ಟ ಶಾಸಕನಾಗಿ ನಡೆದುಕೊಳ್ಳಲಿಲ್ಲ, ಕ್ಷೇತ್ರದ ಜನರ ರಾಜ್ಯದ ಜನರ ಹೆಮ್ಮೆಯ ಶಾಸಕನಾಗಿ ನಡೆದುಕೊಂಡಿದ್ದೇನೆ ಎಂಬ ತೃಪ್ತಿ ನನಗೆ ಇದೆ. ವೈಯಕ್ತಿಕ ಹಿತಾಸಕ್ತಿಗಾಗಿ ಕೆಲಸ ಮಾಡಲಿಲ್ಲ. ಜನರ ಹಿತಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಕ್ರಿಯವಾಗಿ ಎಲ್ಲ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಕರ್ತವ್ಯ ನಿಷ್ಠೆಯಿಂದ ಸೇವೆ ಮಾಡಿರುವೆ ಎಂದು ಅಭಿಮತ ತಿಳಿಸಿದರು.
ಹಣದ ಶಕ್ತಿಯ ಮುಂದೆ ನಾನು ಬಲಿಪಶುವಾದೆ: ನಾನು ಜೆಡಿಎಸ್ ಬಿಟ್ಟಿಲ್ಲ, ಅವರೇ ಹೊರಗೆ ಹಾಕಿದ್ರು. ನಿಮಗೆ ಎಲ್ಲ ಗೊತ್ತಲ್ಲ. ನಾನು ವಿಕ್ಟಿಮ್, ನಾನು ಹಣದ ಶಕ್ತಿಯ ಮುಂದೆ ಬಲಿಪಶು ಆದೆ. ಭ್ರಷ್ಟಾಚಾರವನ್ನು ಎತ್ತಿ ತೋರಿಸಿದ್ದಕ್ಕೆ ನನ್ನನ್ನ ವಿಕ್ಟಿಮ್ ಮಾಡಿದ್ರು. ವೈಯಕ್ತಿಕ ಹಿತಾಸಕ್ತಿಗೆ ನಾನು ಕೆಲಸ ಮಾಡಿಲ್ಲ. ಹಾಜರಿಗಾಗಿ ನಾನು ಭಾಗವಹಿಸಿಲ್ಲ. ಕ್ಷೇತ್ರ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿ ಕೆಲಸ ಮಾಡಿರುವೆ ಎಂದು ಹೇಳಿದರು.