ಬೆಂಗಳೂರು: ಮೊಬೈಲ್, ಟಿವಿ ಗೀಳು, ಮಾದಕ ವ್ಯಸನ ಮುಂತಾದ ಎಲ್ಲ ಸಮಸ್ಯೆಗಳಿಗೆ ಕ್ರೀಡೆಯೇ ಪರಿಹಾರ. ಕ್ರೀಡೆಗೆ ಒತ್ತು ನೀಡಿದಾಗ ಮಾತ್ರ ಸದೃಢ ಸಮಾಜ, ಸದೃಢ ದೇಶ ಕಟ್ಟಲು ಸಾಧ್ಯ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂಡರ್ 14 ವಿಭಾಗದ ಮಿನಿ ಒಲಿಂಪಿಕ್ಸ್ ಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವ ನೀಡುತ್ತೇವೆಯೋ ಅಷ್ಟೇ ಮಹತ್ವ ಕ್ರೀಡೆಗೂ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ರೀತಿಯ ವ್ಯಸನಕ್ಕೆ ಕ್ರೀಡೆಯೇ ಪರಿಹಾರ ಎಂದರು.
ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇರುವುದು ಕ್ರೀಡೆಗೆ. ಮೈದಾನದಲ್ಲಿ ಜಾತಿ, ಮತ, ಧರ್ಮ, ಅಂತಸ್ತಿನ ವ್ಯತ್ಯಾಸ ಕಾಣದು. ಅಷ್ಟೇ ಏಕೆ ದೇಶಗಳ ನಡುವಿನ ಬಾಂಧವ್ಯ ವೃದ್ಧಿಸುವ ಶಕ್ತಿ ಕ್ರೀಡೆಗಿದೆ. ಯಾವುದೇ ವ್ಯಕ್ತಿಗೆ ಆನಂದ, ಪರಿಪೂರ್ಣತೆ ಕೊಡುವ ಶಕ್ತಿ ಕ್ರೀಡೆಗಿದೆ. ಇದನ್ನು ನಂಬಿದರೆ ಮಾತ್ರ ಕ್ರೀಡೆಗೆ ಗೌರವ ಕೊಟ್ಟಂತೆ ಆಗುತ್ತದೆ. ಕ್ರೀಡೆ ಒಂದು ಸಹಜ ಕ್ರಿಯೆ. ಹಾಗಾಗಿ ಅದಕ್ಕೆ ಹೆಚ್ಚಿನ ಆದ್ಯತೆ ನೀಡಲೇಬೇಕು ಎಂದರು.
ಖಾತೆ ನಿರ್ಣಯ ಮಾಡುವ ಅವಕಾಶ ಇಲ್ಲ: ನಮಗೆ ಯಾವ ಖಾತೆ ಬೇಕು ಎಂಬ ಬಗ್ಗೆ ನಿರ್ಣಯ ಮಾಡುವ ಅವಕಾಶ ನಮಗಿಲ್ಲ. ಯಾವ ಖಾತೆ ಬಿಟ್ಟು ಕೊಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರು, ಸಿಎಂ ತೀರ್ಮಾನ ಕೈಗೊಳ್ಳುತ್ತಾರೆ. ಅವರು ಯಾವ ಖಾತೆ ಕೊಡುತ್ತಾರೋ ಅದನ್ನು ನಿಭಾಯಿಸುವುದು ಮಾತ್ರ ನನ್ನ ಕೆಲಸ. ಅವರು ಯಾವ ಖಾತೆ ಕೊಡುತ್ತಾರೆ ಅದನ್ನು ಪಡೆದು ಆರಾಮವಾಗಿ ಕೆಲಸ ಮಾಡುತ್ತೇನೆ ಎಂದರು.