ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಗ ಖ್ಯಾತಿಯ ಗಿರಿಜಾ ಸಿದ್ಧಿ 'ಮೈಸೂರು ಹುಲಿಯಾ' ಎಂಬ ಹಾಡನ್ನು ಹಾಡಿದ್ದಾರೆ. ಎಪ್ಪತ್ತೈದನೇ ವಸಂತಕ್ಕೆ ಕಾಲಿಟ್ಟಿರುವ ರಾಜಕೀಯ ಧುರೀಣ ಸಿದ್ದರಾಮಯ್ಯ ಅವರ ಬಗ್ಗೆ ರಚಿಸಲಾದ ಅಪರೂಪದ ಹಾಡಿಗೆ ಗಾಯಕಿ ಗಿರಿಜಾ ಸಿದ್ಧಿ ಕಂಠದಾನ ಮಾಡಿದ್ದಾರೆ.
ಸಲಗ ಚಿತ್ರದ ಟಿಣಿಂಗ ಮಿಣಿಂಗ ಟಿಶ್ಯಾ ಹಾಡಿನ ಮೂಲಕ ಮನೆಮಾತಾಗಿದ್ದ ಗಿರಿಜಾ ಇದೇ ಮೊದಲ ಬಾರಿಗೆ ಜನಪದ ಶೈಲಿಯಲ್ಲಿ ಹಾಡನ್ನು ಹಾಡಿದ್ದಾರೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ನೀಡಿದ್ದು, ಸಿನಿಮಾ ಶೈಲಿಯಲ್ಲಿ ಹಾಡು ಮೂಡಿಬಂದಿದೆ. ಸಿದ್ದರಾಮಯ್ಯನವರ ಸಾಧನೆಯ ವರ್ಣನೆ ಹೊಂದಿರುವ ಈ ಹಾಡಿಗೆ ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. ಕೈ ಹಿಡಿಯೋ ಕೈ ಸಿದ್ದರಾಮಯ್ಯ ಎನ್ನುತ್ತ ಶುರುವಾಗುವ ಈ ಹಾಡನ್ನು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ನಿರ್ಮಾಣ ಮಾಡಿದ್ದಾರೆ.
![a-song-about-siddaramaiahs-achievement](https://etvbharatimages.akamaized.net/etvbharat/prod-images/15984273_thumb.jpg)
ಗಿರಿಜಾ ಸಿದ್ಧಿಯವರು ಹಾಡಿರುವ ಹಾಡಿನ ಜೊತೆಗೆ ಇದೇ ಆಗಸ್ಟ್ 3ರಂದು ಇನ್ನೊಂದು ಹಾಡು ಸಹ ಬಿಡುಗಡೆ ಆಗಲಿದೆ. ಅದನ್ನು ಚುಟುಚುಟು ಅಂತೈತಿ ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದಾರೆ. ಈ ಹಾಡಿಗರ ಹರ್ಷ ವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಅವರೇ ಸಾಹಿತ್ಯ ಬರೆದಿದ್ದಾರೆ. ಈ ಎರಡೂ ಲಿರಿಕಲ್ ವಿಡಿಯೋ ಹೊಂದಿರುವ ಹಾಡುಗಳು ಎ2 ಎಂಟರ್ಟೈನ್ಮೆಂಟ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿದ್ಧಿ ಹಾಡಿರುವ ಜೈ ಜೈ ಜೈ ಜೈ ಜನನಾಯಕ ಎಂಬ ಸಾಲುಗಳಿಂದ ಕೂಡಿರುವ ಹಾಡು ಎಲ್ಲಡೆ ವೈರಲ್ ಆಗಿದೆ. ಆಗಸ್ಟ್ 3 ರಂದು ಸಿದ್ದರಾಮಯ್ಯನವರ ಹುಟ್ಟುಹಬ್ಬದ ಸಮಾರಂಭ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಅದೇ ದಿನ ಈ ಹಾಡಿನ ಲೋಕಾರ್ಪಣೆಯಾಗಲಿದೆ.
ಓದಿ : 'ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ’: ಹುಬ್ಬಳ್ಳಿ ಅಭಿಮಾನಿ ಬಳಗದಿಂದ ಆಲ್ಬಂ ಸಾಂಗ್