ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ನಿಂದ ಮೃತಪಟ್ಟಿರುವ ಐದು ಮಂದಿ ಪೊಲೀಸ್ ಸಿಬ್ಬಂದಿಗೆ ನಗರ ಪೊಲೀಸ್ ಇಲಾಖೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಕಲಾಸಿಪಾಳ್ಯ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬೇಲೂರಯ್ಯ, ವಿವಿಪುರಂ ಸಂಚಾರಿ ಠಾಣೆಯ ಎಎಸ್ಐ ಶಿವಣ್ಣ, ವಿಲ್ಸನ್ ಗಾರ್ಡನ್ ಠಾಣೆಯ ಎಎಸ್ಐ ಕಲ್ಕೆರ್ ಹಿರೇಮಠ್, ವೈಟ್ ಫೀಲ್ಡ್ ಠಾಣೆಯ ಎಎಸ್ಐ ಹಾಗೂ ಕೆಎಸ್ಆರ್ಪಿ ಸಿಬ್ಬಂದಿ ಮಂಜೇಶ್ ಎಂಬುವರು ಕೊರೊನಾದಿಂದ ಮೃತಪಟ್ಟಿದ್ದರು. ಇವರ ಕರ್ತವ್ಯಪ್ರಜ್ಞೆ ಹಾಗೂ ತ್ಯಾಗದಿಂದ ಜೀವ ತೆತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೊರೊನಾ ವಾರಿಯರ್ಸ್ ಭಾವಚಿತ್ರಗಳಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ನಮ್ಮೆಲ್ಲರಿಗೆ ತೀವ್ರ ಬೇಸರ ತರಿಸಿದೆ. ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಪೊಲೀಸ್ ಸಿಬ್ಬಂದಿ ಆತಂಕಪಡುವ ಅಗತ್ಯವಿಲ್ಲ. ಸದಾ ನಿಮ್ಮ ನೆರವಿಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇರಲಿದೆ. ಈಗಾಗಲೇ ಮೃತಪಟ್ಟಿರುವ ಮೂವರು ಸಿಬ್ಬಂದಿಗೆ ವಿಮೆ ಪರಿಹಾರ ನೀಡಲಾಗಿದ್ದು, ಮತ್ತಿಬ್ಬರಿಗೆ ಶೀಘ್ರದಲ್ಲೇ ಪರಿಹಾರ ಸಂದಾಯ ಮಾಡಲಾಗುವುದು. ಕೊರೊನಾ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಕೆಲಸ ಮಾಡಿ ಎಂದು ಆಯುಕ್ತರು ಅಭಯ ನೀಡಿದ್ದಾರೆ.