ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶ್ರೀನಿವಾಸ್ (39) ಎಂದು ಗುರುತಿಸಲಾಗಿದೆ.
ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಆರೋಪಿ ಐಷಾರಾಮಿ ಜೀವನ ನಡೆಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ. ಈತ ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡಿದ್ದ. 2019ರಿಂದ ಕಳ್ಳತನದಲ್ಲಿ ತೊಡಗಿರುವ ಆರೋಪಿ ಕದ್ದ ದ್ವಿಚಕ್ರ ವಾಹನಗಳನ್ನು ಆಂಧ್ರ, ಕೋಲಾರದ ಗಡಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದ. ಬಳಿಕ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಇತ್ತೀಚಿಗೆ ರಾಜಾಜಿನಗರ ಮೆಟ್ರೋ ಸ್ಟೇಷನ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳತನ ಮಾಡಿದ್ದ ಆರೋಪಿಯ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 12.5 ಲಕ್ಷ ಮೌಲ್ಯದ ವಿವಿಧ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಓದಿ : ಅಪ್ರಾಪ್ತೆ ಅಪಹರಣ: ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ