ಬೆಂಗಳೂರು : ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ನಮ್ಮ ಪಕ್ಷದ ಚಿಹ್ನೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ನಾವು ಜಾತ್ಯತೀತ ಸಿದ್ಧಾಂತ ಬಿಟ್ಟುಕೊಡಲು ಆಗುವುದಿಲ್ಲ. ಜೆಡಿಎಸ್ ಸಿದ್ಧಾಂತವನ್ನು ಮೆಚ್ಚಿ ಬಿಜೆಪಿಯವರು ಬಂದಿದ್ದಾರೆಯೇ? ಅಥವಾ ಬಿಜೆಪಿ ಸಿದ್ಧಾಂತವನ್ನು ಮೆಚ್ಚಿ ಜೆಡಿಎಸ್‍ನವರು ಹೋಗಿದ್ದಾರಾ? ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಎಲ್ಲ ಕಡೆ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದರು.
ಕೇರಳದ ಜೆಡಿಎಸ್ ಘಟಕದವರು ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತಿನ ಘಟಕಗಳ ಜೊತೆಗೆ ಮಾತನಾಡಬೇಕು. ಅವರೆಲ್ಲ ಒಪ್ಪಲಿಲ್ಲ ಅಂದರೆ ಪಕ್ಷದ ಚಿಹ್ನೆ ಉಳಿಯುತ್ತಾ? ಎಂದು ಪ್ರಶ್ನಿಸಿದರು. ಇದೇ ಅಕ್ಟೋಬರ್ 16ರಂದು ಮೈತ್ರಿ ಕುರಿತಂತೆ ಸವಿಸ್ತಾರವಾಗಿ ಚರ್ಚೆ ಮಾಡುತ್ತೇವೆ. ಎಲ್ಲರೂ ಸಲಹೆ ಕೊಡಲು ಕಾತರದಿಂದ ಕಾಯುತ್ತಿದ್ದಾರೆ. ಆ ಸಭೆಯ ನಂತರ ಅಭಿಪ್ರಾಯವನ್ನು ಸಂಗ್ರಹಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರಿಗೆ ತಿಳಿಸುವುದಾಗಿ ಹೇಳಿದರು.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾದ ಬಳಿಕ ನಾನು ಪಕ್ಷದಲ್ಲಿ ಕಾಣಿಸುತ್ತಿಲ್ಲ ಎಂಬುದು ಸರಿಯಲ್ಲ. ಎಲ್ಲ ಜಿಲ್ಲೆಯವರು ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಕೂಡ ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದೇನೆ. ಈ ಮೈತ್ರಿ ಕಾಂಗ್ರೆಸಿಗೆ ಬೇಕೊ, ಬಿಜೆಪಿಗೆ ಬೇಕೊ ಎಂಬುದು ಗೊತ್ತಿಲ್ಲ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೇ. 20ರಷ್ಟು ಮತಗಳು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಂದಿದೆ. ಇದನ್ನು ಶಾಸಕರು ಒಪ್ಪಿದ್ದಾರೆ. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಯಾವ ಮತಗಳು ಬರಲಿಲ್ಲ, ಏಕೆ ಬರಲಿಲ್ಲ ಎಂಬುದರ ಕಾರಣ ಹುಡುಕಬೇಕಿದೆ. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ಏನು ಅಡುಗೆ ಮಾಡಬೇಕೊ ಅದನ್ನು ಮಾಡಿದ್ದೇನೆ. ಬಿರಿಯಾನಿಯನ್ನೇ ಯಾಕೆ ಮಾಡಿಲ್ಲ ಎಂದರೆ ಅದು ನನಗೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಆದರೆ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಇಬ್ರಾಹಿಂ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸ್ಥಾನವನ್ನೇ ಬಿಟ್ಟು ಬಂದಿದ್ದೇನೆ. ನಾನು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವನಲ್ಲ, ನಾಡಿನ ಜನರ ಹೃದಯದಲ್ಲಿದ್ದೇನೆ ಎಂದು ರಾಯಭಾರ ಹುದ್ದೆಯ ಬೇಡಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಇಬ್ರಾಹಿಂ ಅವರನ್ನು ನಾವೇನು ಕರೆದಿಲ್ಲ ಅನ್ನುವ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀವು ನೋಡಿದ್ದೀರಿ ಕುಮಾರಸ್ವಾಮಿ ಎಷ್ಟು ಬಾರಿ ನಮ್ಮ ಮನೆಗೆ ಬಂದಿದ್ದರು ಅಂತ ಎಂದರು.
ನೀವು ಕಾಂಗ್ರೆಸ್ಗೆ ಸೇರುತ್ತಿರಾ ಎಂಬ ಪ್ರಶ್ನೆಗೆ ನಂತರ ದೇವೇಗೌಡರ ಜೊತೆ ಮಾತನಾಡುತ್ತೇನೆ. ಪಕ್ಷದ ಸಿದ್ಧಾಂತಗಳನ್ನು ಜೀರ್ಣಿಸಿಕೊಂಡಿದ್ದೇನೆ. ಈಗಲೂ ವಿಷಕಂಠನಾಗಿದ್ದೇನೆ. ಕುಮಾರಸ್ವಾಮಿ ಅವರ ಒಂದು ವಿಡಿಯೋ ವೈರಲ್ ಆಗಿದೆ. ಎಲ್ಲಿ ಜೆಡಿಎಸ್ ಪ್ರಾಬಲ್ಯ ಇಲ್ಲವೊ ಅಲ್ಲಿ ಕಾಂಗ್ರೆಸ್ಗೆ ಮತ ನೀಡಿ ಅಂತ ಹೇಳಿರೋ ವಿಡಿಯೋ ವೈರಲ್ ಆಗಿದೆ. ಇದರಿಂದ ಆತಂಕ ಪಡಬೇಕಿಲ್ಲ, ಎರಡು ಇದ್ದ ಜನತಾದಳ ನೂರು ಆಯಿತು. ಈಗ 19 ರಿಂದ ಮತ್ತೆ ಹೆಚ್ಚಾಗುತ್ತದೆ. ಈಗ ಕಾರಣ ಹುಡುಕಬೇಕಿದೆ ಎಂದು ಸಿ ಎಂ ಇಬ್ರಾಹಿಂ ಹೇಳಿದರು.
ಮೈತ್ರಿ ವಾಪಸ್ ತೆಗೆದುಕೊಳ್ಳಬಹುದು : ಸಿ ಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾದ ಮೇಲೆ ನಾವು ಸಂಪಾದನೆ ಮಾಡಿದಾದ್ರು ಏನು? ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಇಬ್ರಾಹಿಂ ಅವರು, ಕುಮಾರಸ್ವಾಮಿ ಅವರು ತಿರುಗಾಡಿಸಿದ್ದಾರೆ, ನಾನು ತಿರುಗಾಡಿದ್ದೇನೆ. ನಮಿಬ್ಬರನ್ನ ಬಿಟ್ಟರೆ ಮೂರನೆಯವರು ಇಲ್ಲ. ಬಿಜೆಪಿಯವರು ಜೆಡಿಎಸ್ ಅನ್ನು ಮುಗಿಸಬೇಕಂತ ಇದ್ದರು. ಪ್ರಧಾನಿ ಮೋದಿ ಎರಡು ಬಾರಿ ಜೆಡಿಎಸ್ ಕ್ಷೇತ್ರಗಳಲ್ಲಿ ಸರ್ವೆ ಮಾಡಿಸಿದ್ರು. ಈಗಲೂ ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ವಿಶ್ವಾಸ ಇದೆ. ಮೈತ್ರಿ ವಾಪಸ್ ತೆಗೆದುಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಬಳಿಕ ಬಿಜೆಪಿ ಹಲವಾರು ನಾಯಕರು ನನ್ನ ಜೊತೆಗೆ ಮಾತನಾಡಿದ್ದಾರೆ. ನಮಗೂ, ಅವರಿಗೂ ಇರುವ ವ್ಯತ್ಯಾಸ ಅಷ್ಟೇ. ನಾನೇ ಯಾಕೆ ಬಿಜೆಪಿಗೆ ಹೋಗಬಾರದಿತ್ತು. ನನಗೆ ಅಲ್ಲಿ ಸ್ಥಾನವಿದೆ. ರಾಜೀನಾಮೆ ಕೊಟ್ಟಿರೋರು ಕೆಲವರು 16ಕ್ಕೆ ಸಭೆಗೆ ಬರುತ್ತಾರೆ ಎಂದರು.
ಯಾವುದೇ ಯೋಚನೆ ಇಲ್ಲ : ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ನನ್ನ ಮನಸ್ಸಿನಲ್ಲಿ ಯಾವುದೇ ಯೋಚನೆ ಇಲ್ಲ. ಯಾವ ಎಲೆಕ್ಷನ್ಗೆ ನಿಲ್ಲುವುದಿಲ್ಲ. ನನಗೆ ಸಾಕಾಗಿದೆ. ಎಲ್ಲಿಂದ ಹಣವನ್ನು ತರುವುದು. ಮಹಾತ್ಮ ಗಾಂಧಿಯವರನ್ನು ನಿಲ್ಲಿಸಿದ್ರು 20 ಕೋಟಿ ದುಡ್ಡು ಬೇಕಾಗುತ್ತದೆ ಎಂದು ಹೇಳಿದರು. ಪಕ್ಷದ ಅಧ್ಯಕ್ಷರ ಮಾತು ನಡೆಯಲ್ಲ ಎಂಬ ವಿಚಾರದಲ್ಲಿ, ನಾನು ಅಧ್ಯಕ್ಷ ಆಗಿದ್ದಾಗ ಹಲವು ವಿಚಾರವನ್ನು ತಡೆದಿದ್ದೆ. ನಾನು ಹೇಳಿರುವ ಕೆಲವು ವಿಚಾರ ಆಗಿದೆ. ಇದಕ್ಕೆ ದೇವೇಗೌಡರು ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಜನರ ಒಲವು ಯಾವ ಕಡೆ ಇರುತ್ತದೆ ಎಂಬುದು ಬಹಳ ಮುಖ್ಯ. ಕೇಂದ್ರದ ಚುನಾವಣೆಯಲ್ಲಿ ಯಾರನ್ನು ಬಿಂಬಿಸುತ್ತೀರಿ?. ಇಂಡಿಯಾ ಮೈತ್ರಿ ಪ್ರಧಾನಿಗೆ ಯಾರನ್ನು ಬಿಂಬಿಸುತ್ತಾರೆ ಕಾದು ನೋಡಬೇಕು. ಮೋದಿಗೆ ಬಂದಿರುವುದೇ 30% ರಷ್ಟು ಮತ. 70% ಮತಗಳು ಹರಿದು ಹಂಚಿಹೋಗಿದೆ. ಇಂಡಿಯಾ ಬಗ್ಗೆ ನಾನು ತಿರುಗಿ ನೋಡಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಎಷ್ಟು ಸೀಟು ಬರಬಹುದು? ಎಂಬ ಪ್ರಶ್ನೆ ಇದೆ. ಇದನ್ನು ನೋಡಬೇಕು ಎಂದರು.
ಮುಂದೆ ಬಿಜೆಪಿಗೆ ಕಡಿಮೆ ಸ್ಥಾನ ಬಂದರೆ, ಜೆಡಿಎಸ್ ಜೊತೆಗೆ ಹೋಗಿದ್ದಕ್ಕೆ ಇಷ್ಟೆಲ್ಲಾ ಆಯಿತು ಎಂದು ಬಿಜೆಪಿ ಹೇಳುತ್ತಾರೆ. ಈ ಮೈತ್ರಿ ಲೋಕಸಭಾ ಚುನಾವಣೆಗಿಂತ, ವಿಧಾನಸಭಾ ಚುನಾವಣೆಯ ಮೇಲೆ ಹೆಚ್ಚಿನ ಹೊಡೆತ ಬೀಳಲಿದೆ. 19 ಮಂದಿಗಿಂತ ಕಡಿಮೆ ಸ್ಥಾನ ಬರುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ನೀಡಿದ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಶಿವಾಜಿ, ಮಹಾತ್ಮ ಗಾಂಧೀಜಿ, ಟಿಪ್ಪು ಸುಲ್ತಾನ್ ಕಟೌಟ್‍ಗಳನ್ನು ಹಾಕಿದರೆ ತಪ್ಪೇ? ಟಿಪ್ಪು, ಔರಂಗಜೇಬ್ ಯಾರು ಎಂದು ಗೊತ್ತೆ? ಔರಂಗಜೇಬ್ ಹಿಂದೂಸ್ಥಾನದ ದೊರೆಯಾಗಿದ್ದರು. ಅವರ ಕಟೌಟ್ ಹಾಕಿದರೆ ತಪ್ಪೇನು? ಎಂದು ಇದೇ ಸಂದರ್ಭದಲ್ಲಿ ಇಬ್ರಾಹಿಂ ಪ್ರಶ್ನಿಸಿದರು.
ಜಾತಿ ಗಣತಿ ಬಿಡುಗಡೆ ಮಾಡಿ : ಈಗಾಗಲೇ ಬೇರೆ ರಾಜ್ಯಗಳಲ್ಲಿ ಜಾತಿಗಣತಿ ಬಿಡುಗಡೆಯಾಗಿದೆ. ಇಲ್ಲಿಯೂ ಬಿಡುಗಡೆ ಮಾಡಬೇಕು. ನಾನು ಸಿದ್ದರಾಮಯ್ಯರನ್ನು ಒತ್ತಾಯಿಸುತ್ತೇನೆ. ಮೊದಲು ಜಾತಿ ಗಣತಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಶಾಮನೂರು ಶಿವಶಂಕರಪ್ಪ ಯಾರ ಬಂಡವಾಳದ ಮೇಲೆ ಎಲೆಕ್ಷನ್ ಹಾಕಿದ್ರು?. ಅಲ್ಪಸಂಖ್ಯಾತ ಮತಗಳ ಮೇಲೆ ಗೆದ್ದಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರಿಗೆ 90 ವರ್ಷ ವಯಸ್ಸಾಗಿದೆ. ಅವರ ವಯಸ್ಸಿಗೆ ಗೌರವ ಕೊಡಬೇಕು. 74 ಮಂದಿ ಇದ್ದಾರೆ ಅಂತಾರೆ. ಸಮುದಾಯದ ಬಗ್ಗೆ ಅನ್ಯಾಯ ಅಂದರೆ ಆಯಿತು. ಅದನ್ನು ಬಿಟ್ಟು ಬೇರೆ ಮಾತನ್ನಾಡಿದ್ರೆ ಹೇಗೆ?. ಸರ್ಕಾರಕ್ಕೇನೂ ಕಷ್ಟವಿಲ್ಲ. ಶಾಮನೂರು ಶಿವಶಂಕರಪ್ಪ ಜಂಗಮರ ಬಗ್ಗೆನೂ ಮಾತನಾಡಲಿ. ಸರ್ಕಾರ ಬಂದು 5 ತಿಂಗಳಾಯಿತು. ಬಿಜೆಪಿಗೆ ಈ ಬಾರಿ ಲಿಂಗಾಯತರ ಒಲವು ಬರಲ್ಲ. ಲಿಂಗಾಯತ ಮತಗಳು ಬಿಟ್ಟು ಹೋಗಿದ್ದರಿಂದ ಅಮಿತ್ ಶಾ ಮೈತ್ರಿಗೆ ಬಂದಿದ್ದು ಎಂದರು.
ರಾಗಿಗುಡ್ಡ ಗಲಭೆ ಕುರಿತು ರಾಮಲಿಂಗಾರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಹೊಸದೇನಲ್ಲ, ರಾಮಲಿಂಗಾರೆಡ್ಡಿ ಹಿಂದೆ ಗೃಹಸಚಿವರಾಗಿದ್ದವರು. ಬುರ್ಖಾ ಹಾಕೊಂಡು ಯಾರು ಹೋಗಿದ್ರು ಗೊತ್ತಿದೆ. ಇದಕ್ಕಾಗಿಯೇ ಎಲ್ಲೆಲ್ಲಿ ಗಲಭೆ ಆಗುತ್ತೋ ನ್ಯಾಯಾಂಗ ತನಿಖೆ ನಡೆಸಬೇಕು. 30 ದಿನಗಳಲ್ಲಿ ವರದಿ ನೀಡುವಂತಹ ಪರಿಸ್ಥಿತಿ ತರಬೇಕು. ಎಲ್ಲಿ ಗಲಭೆ ಆಗುತ್ತೋ ಅಲ್ಲಿ ಡಿಸಿ, ಎಸ್ಪಿ ಹೊಣೆ ಮಾಡಿದರೆ ಎಲ್ಲಾ ಸರಿಹೋಗುತ್ತದೆ. ಪೊಲೀಸರ ಮೇಲೆ ಪೂರ್ಣ ಜವಾಬ್ದಾರಿ ಬಿದ್ದರೆ ಅಲರ್ಟ್ ಆಗ್ತಾರೆ. ಆಗ ಸತ್ಯಾಸತ್ಯತೆ ಗೊತ್ತಾಗುತ್ತದೆ. ರಾಮಲಿಂಗಾರೆಡ್ಡಿ ಅನುಭವದ ಆಧಾರದ ಮೇಲೆ ಹೇಳಿದ್ದಾರೆ ಎಂದು ಅವರ ಹೇಳಿಕೆಯನ್ನು ಇಬ್ರಾಹಿಂ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ: ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾದ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು