ಬೆಂಗಳೂರು: ಪರರ ಸ್ವತ್ತು ಪಾಶಾಣಕ್ಕೆ ಸಮ ಎನ್ನುವ ಮಾತೊಂದಿದೆ. ಇಲ್ಲಿ ಆಗಿದ್ದೂ ಸಹ ಅದೆ. ಬಯಸದೇ ಬಂದ ಭಾಗ್ಯ ಎಂದು ಕಂಡವರ ಹಣದಲ್ಲಿ ಲಕ್ಸುರಿ ಜೀವನದ ಕನಸು ಕಂಡವನು ಇದೀಗ ಜೈಲು ಸೇರಿದ್ದಾನೆ. ಸಿನಿಮೀಯ ಮಾದರಿಯಲ್ಲಿ ಲಕ್ಷ ಲಕ್ಷ ಹಣ ತುಂಬಿದ್ದ ಬಾಕ್ಸ್ ಸಿಕ್ಕ ಖುಷಿಯಲ್ಲಿ ಆರು ದಿನ ಕಳೆದಿದ್ದ ವರುಣ್ ಎಂಬಾತನನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?: ಚಂದ್ರಾ ಲೇಔಟ್ ನಿವಾಸಿಯಾಗಿರುವ ಪ್ರಮೋದ್ ಎಂಬುವವರು ಸೈಟ್ ಖರೀದಿಸಲು 94 ಲಕ್ಷ ರೂ. ಕೂಡಿಸಿಟ್ಟಿದ್ದರು. ಸೋಮವಾರ ಆ ಹಣವನ್ನು ಎಣಿಸಲು ಸ್ನೇಹಿತನ ಅಂಗಡಿಗೆ ಹೊರಟಿದ್ದ ಪ್ರಮೋದ್ ಮಾರ್ಗ ಮಧ್ಯೆ ವಕೀಲರನ್ನು ಭೇಟಿಯಾಗಬೇಕಿತ್ತು. ಮನೆಯಿಂದ ಬ್ಯಾಗ್ ಹಾಗೂ ಒಂದು ಬಾಕ್ಸ್ನಲ್ಲಿ ಹಣ ಹಾಕಿಕೊಂಡು ಹೊರಟಿದ್ದ ಪ್ರಮೋದ್, ಮನೆ ಕೆಳಗೆ ಬರುತ್ತಿದ್ದಂತೆ ಕಾರಿನ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೈಯಲ್ಲಿದ್ದ ಹಣದ ಬಾಕ್ಸ್ ಅನ್ನು ಪಕ್ಕದಲ್ಲಿದ್ದ ಅಪರಿಚಿತ ಸ್ಕೂಟರ್ ಮೇಲಿಟ್ಟಿದ್ದರು.
ಬಳಿಕ ಹಣದ ಬಾಕ್ಸ್ ಮರೆತು ದಾಖಲಾತಿ ಇದ್ದ ಬ್ಯಾಗ್ ಸಮೇತ ತೆರಳಿದ್ದರು. ಬಳಿಕ ಸ್ಕೂಟರ್ ಮಾಲೀಕ ವರುಣ್ ಬಂದು ನೋಡಿದಾಗ ಬಾಕ್ಸ್ ಕಣ್ಣಿಗೆ ಬಿದ್ದಿತ್ತು. ಬಾಕ್ಸ್ ತೆರೆದು ನೋಡಿದಾಗ ಕಂತೆ ಕಂತೆ ಹಣ ಕಂಡಿತ್ತು. ಹಣ ನೋಡುತ್ತಿದ್ದಂತೆ ಅದೃಷ್ಟ ಖುಲಾಯಿಸಿದೆ ಎಂದು ಭಾವಿಸಿದ ವರುಣ್ ಹಿಂದೆ ಮುಂದೆ ನೋಡದೆ ಹಣದ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದ. ನಂತರ ಶ್ರೀನಗರದ ತನ್ನ ಮನೆಯಲ್ಲಿ ಹಣವನ್ನು ಹಾಗೆ ಇಟ್ಟುಕೊಂಡಿದ್ದನು. 94 ಲಕ್ಷ ಹಣ ಏನು ಮಾಡಬೇಕೊ ಎನ್ನುವ ಗೊಂದಲದಲ್ಲೇ ಕಳೆದಿದ್ದ ವರುಣ್, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದನು. ಆದರೆ ಉಳಿದ ಹಣವನ್ನು ಎಲ್ಲಿಯೂ ಖರ್ಚು ಮಾಡದೆ ಮನೆಯಲ್ಲಿ ಇಟ್ಟುಕೊಂಡಿದ್ದನು.
ಇತ್ತ ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್ಗೆ ಶಾಕ್ ಕಾದಿತ್ತು. ವಾಪಸ್ ಅದೇ ಸ್ಥಳಕ್ಕೆ ಬಂದು ನೋಡಿದಾಗ ಸ್ಕೂಟರ್, ಹಣ ಎರಡೂ ಇರಲಿಲ್ಲ. ತಕ್ಷಣ ಪ್ರಮೋದ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಕೂಟರ್ ಹೊರಟ ಮಾರ್ಗದಲ್ಲಿ ಮುನ್ನೂರಕ್ಕೂ ಅಧಿಕ ಸಿಸಿಟಿವಿ ಪರಿಶೀಲಿಸಿ ಕೊನೆಗೆ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ವರುಣ್ನನ್ನು ಬಂಧಿಸಲಾಗಿದ್ದು, ಆತನಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಏರ್ಪೋರ್ಟ್ನಲ್ಲಿ ₹14 ಲಕ್ಷದ ಚಿನ್ನ ಜಪ್ತಿ, ಪ್ರಯಾಣಿಕ ವಶಕ್ಕೆ