ಬೆಂಗಳೂರು: ವಿಚ್ಛೇದನ ಪಡೆದ ಮಹಿಳೆಯರನ್ನೇ ವೈವಾಹಿಕ ಜಾಲತಾಣವಾದ ಮ್ಯಾಟ್ರಿಮೋನಿ ಮೂಲಕ ಟಾರ್ಗೆಟ್ ಮಾಡಿ ಮದುವೆ ಭರವಸೆಯ ಮೂಲಕ ಯಾಮಾರಿಸಿ ಹಣ ಪೀಕುತ್ತಿದ್ದ ಖತರ್ನಾಕ್ ವಂಚಕನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಆಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ. ಈತ ಮೂಲತಃ ವಿಜಯಪುರದವನಾಗಿದ್ದು, ಹಾಸನದಲ್ಲಿ ಮನೆ ಮಾಡಿಕೊಂಡಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಜಗನ್ನಾಥ್, ಹಣ ಸಂಪಾದನೆಗಾಗಿ ಅಡ್ಡ ದಾರಿ ತುಳಿದಿದ್ದ. ವಿಚ್ಛೇದನ ಪಡೆದ ಹಾಗೂ ಹಣವಿರುವ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ. ತಾನು ಶ್ರೀಮಂತ ಎಂದು ಬಿಂಬಿಸಿಕೊಂಡು ಮ್ಯಾಟ್ರಿಮೋನಿ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ಬಣ್ಣ ಬಣ್ಣದ ಮಾತುಗಳನ್ನು ಆಡುತ್ತಿದ್ದ.
ಮದುವೆಯಾಗುವುದಾಗಿ ಹೇಳಿ ಮಹಿಳೆಯರಿಂದ ಲಕ್ಷ ಲಕ್ಷ ವಂಚಿಸಿ ಬಳಿಕ ಮೊಬೈಲ್ ಸ್ವಿಚ್ಆಫ್ ಮಾಡಿಕೊಳ್ಳುತ್ತಿದ್ದ. ಮುಗ್ಧ ಮಹಿಳೆಯರಿಗೆ ಮದುವೆಯಾಗುವ ಭರವಸೆ ನೀಡುವುದಲ್ಲದೆ ಮಾತಿನಲ್ಲಿ ಮನೆ ಕಟ್ಟುತ್ತಿದ್ದ. ಆರೋಪಿ ಮಾತಿಗೆ ಮರುಳಾಗಿ ಮಹಿಳೆಯೊಬ್ಬಳು ಏಳು ಲಕ್ಷ ಹಣ ನೀಡಿ ಕೈ ಸುಟ್ಟುಕೊಂಡಿದ್ದರು. ಈತನ ವಂಚನೆಯಿಂದ ಹಣ ಕಳೆದುಕೊಂಡ ಮಹಿಳೆ ಬನಶಂಕರಿ ಪೊಲೀಸ್ ಠಾಣೆಗೆ ನೀಡಿದ ದೂರಿನ್ವನಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಹಾಸನದಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ವಿಚಾರಣೆ ವೇಳೆ, ಹತ್ತಕ್ಕೂ ಹೆಚ್ಚು ವಿಚ್ಛೇದಿತ ಮಹಿಳೆಯರಿಗೆ ಮೋಸ ಮಾಡಿ 25 ಲಕ್ಷಕ್ಕೂ ಹೆಚ್ಚು ಹಣ ವಂಚಿರುವುದು ಹಾಗೂ ಐದು ಮಂದಿ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿರುವುದು ತಿಳಿದುಬಂದಿದೆ. ಅಲ್ಲದೆ, ಹಾಸನ, ವಿಜಯಪುರ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಹಿಳೆಯರಿಗೆ ವಂಚನೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯಿಂದ ಆರು ಲಕ್ಷ ರೂ. ಬೆಲೆ ಬಾಳುವ ಕಾರು, ಎರಡು ಮೊಬೈಲ್, 25 ಸಿಮ್ ಕಾರ್ಡ್, 22 ಎಟಿಎಂ ಕಾರ್ಡ್,ಮೂರು ಪಾನ್ ಕಾರ್ಡ್, ಮೂರು ಓಟರ್ ಐಡಿ, ಆಧಾರ್ ಕಾರ್ಡ್, ಪಾಸ್ ಬುಕ್ ವಶಕ್ಕೆ ಪಡೆದಿದ್ದಾರೆ. ಸದ್ಯ ವಂಚಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.