ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಕೊಲೆಯಲ್ಲಿ ಅಂತ್ಯಕಂಡಿದೆ. ಪ್ರೀತಿಸುತ್ತಿದ್ದ ಹುಡುಗಿಯನ್ನು ಕೊಲೆ ಮಾಡಿದ್ದು ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಪ್ರಿಯಕರನನ್ನ ಸೆರೆಹಿಡಿದಿದ್ದಾರೆ. ನೇಪಾಳ ಮೂಲದ ಕೃಷ್ಣಕುಮಾರಿ 23 ಕೊಲೆಯಾದ ಯುವತಿಯಾಗಿದ್ದು, ಈಕೆಯನ್ನು ಹತ್ಯೆ ಮಾಡಿದ ಆರೋಪದಡಿ ಸಂತೋಷ್ ದಾಮಿ ಎಂಬಾತ ಪೊಲೀಸರ ಅತಿಥಿಯಾಗಿದ್ದಾನೆ.
ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿದ್ದ ಕೃಷ್ಣಕುಮಾರಿ ಕೆಲಸ ಮಾಡುತ್ತಿದ್ದರೆ, ಪ್ರಿಯಕರ ಟಿಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಮೊದಲು ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಒಂದೇ ರೂಂ ಬಾಡಿಗೆ ಪಡೆದು ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದ ಪ್ರೇಮಿಗಳ ಮಧ್ಯೆ ನಿನ್ನೆ ರಾತ್ರಿ ಜಗಳ ನಡೆದಿದೆ. ತಮ್ಮ ಮೇಲೆ ಹಲ್ಲೆ ಮಾಡುತ್ತಿರುವ ಬಗ್ಗೆ ಸ್ನೇಹಿತೆಯರಿಗೆ ವಿಡಿಯೋ ಕಾಲ್ ಮಾಡಿ ತಿಳಿಸಿದ್ದಳು. ಆದರೆ, ಸ್ನೇಹಿತೆಯರು ಮನೆಗೆ ಬರುವಷ್ಟರಲ್ಲಿ ಕೃಷ್ಣಕುಮಾರಿ ಹತ್ಯೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷದಿಂದಲೂ ಪರಿಚಿತರಾಗಿದ್ದ ಪ್ರೇಮಿಗಳು ಜೀವನ ಸಾಗಿಸಲು ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಸಂತೋಷ್, ಪ್ರಿಯತಮೆ ಮೇಲೆ ಅನುಮಾನ ವ್ಯಕ್ಯಪಡಿಸಿದ್ದ. ಪರಪುರುಷನೊಂದಿಗೆ ಪ್ರಿಯತಮೆ ಸಂಬಂಧ ಹೊಂದಿದ್ದಾಳೆಂದು ಶಂಕೆ ವ್ಯಕ್ತಪಡಿಸಿ, ನಿನ್ನೆ ರಾತ್ರಿ ಕ್ಯಾತೆ ತೆಗೆದಿದ್ದನಂತೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಈ ವೇಳೆ ಕುತ್ತಿಗೆ ಹಿಡಿದು ತಲೆಯನ್ನು ಗೋಡೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆ ಪರಿಣಾಮ ಯುವತಿ ಕುಸಿದುಬಿದ್ದಿದ್ದಳು. ಕೂಡಲೇ ಸಮೀಪದ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣಕುಮಾರಿ ಮೃತಪಟ್ಟಿದ್ದಾಳೆ.
ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ಸಂತೋಷ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಗಡಿಯಲ್ಲಿ ಹೈ ಅಲರ್ಟ್