ಬೆಂಗಳೂರು: ಸಿಗರೇಟ್ ಹೊಗೆ ಬಿಡಬೇಡಿ ಎಂದಿದ್ದಕ್ಕೆ ಆಕ್ರೋಶಗೊಂಡ ರೌಡಿ ಗ್ಯಾಂಗ್ವೊಂದು ಯುವಕನ ಮೇಲೆ ಏಕಾಏಕಿ ದಾಳಿ ಮಾಡಿ ಮನಬಂದಂತೆ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ನವೀನ್ ದಾವಣಗೆರೆ ನಿವಾಸಿಯಾಗಿದ್ದು, ಬೆಂಗಳೂರಿನ ಜೆ ಪಿ ನಗರದ ಜಿಮ್ವೊಂದರಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. ನಗರದ ರಿಂಗ್ ರಸ್ತೆಯ ಜೆ. ಡಬ್ಲೂ ಮ್ಯಾರಿಯೇಟ್ ಬಿಲ್ಡಿಂಗ್ ಟೆರೇಸ್ನಲ್ಲಿರುವ ನಜಾರ ಪಬ್ನಲ್ಲಿ ಡಿ ಜೆ ಪಾರ್ಟಿ ಆಯೋಜಿಸಲಾಗಿತ್ತು.
ನವೀನ್ ಸ್ನೇಹಿತ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಈ ವೇಳೆ ಆರೋಪಿ ಪ್ರಶಾಂತ್ ಗೌಡ ಸಿಗರೇಟ್ ಸೇದಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ವೇಳೆ ನವೀನ್ ಕೈಗೆ ತಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನವೀನ್ ಪಕ್ಕಕ್ಕೆ ಹೋಗಿ ಸಿಗರೇಟ್ ಸೇದಿ ಎಂದು ಸ್ವಲ್ಪ ತಳ್ಳಿದ್ದರಂತೆ.
ಇದನ್ನೆ ನೆಪಮಾಡಿಕೊಂಡ ಪ್ರಶಾಂತ್ ತನ್ನ ಗೆಳೆಯರೊಂದಿಗೆ ಸೇರಿ ನವೀನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸದ್ಯ ನವೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಮಗೆ ಜೀವ ಬೆದರಿಕೆಯಿದ್ದು ರಕ್ಷಣೆ ನೀಡುವಂತೆ ಪೊಲೀಸರಲ್ಲಿ ನವೀನ್ ಮನವಿ ಮಾಡಿದ್ದಾರೆ.