ಬೆಂಗಳೂರು:ಯಶವಂತಪುರ ಕ್ಷೇತ್ರ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕಣ. ಈ ರಣಕಣದಲ್ಲಿ ಗಾಂಧಿವಾದಿಯೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಶಂಭುಲಿಂಗೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ 59 ವಯಸ್ಸಿನ ಇವರು ಯಶವಂತಪುರ ಉಪಸಮರದಲ್ಲಿನ ಸ್ಪೆಷಲ್ ಕ್ಯಾಂಡಿಡೇಟ್ ಆಗಿದ್ದಾರೆ. ಗಾಂಧಿ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಶಂಭುಲಿಂಗೇಗೌಡ ಗಾಂಧಿ ವೇಷ, ಕೈಯಲ್ಲಿ ಕೋಲು ಹಿಡಿದು ಪ್ರಸಕ್ತ ರಾಜಕೀಯ ವ್ಯವಸ್ಥೆ ಬದಲಾಯಿಸುವ ಉದ್ದೇಶದೊಂದಿಗೆ ಗಾಂಧಿ ಗೆಟಪ್‌ನಲ್ಲಿ ಚುನಾವಣಾ ರಣಕಣಕ್ಕಿಳಿದಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಸುವ ವೇಳೆಯೂ ಒಬ್ಬಂಟಿಯಾಗಿ ಬಂದಿದ್ದ ಶಂಭುಲಿಂಗೇಗೌಡರು, ಗಾಂಧಿ ಗೆಟಪ್‌ನಲ್ಲಿ ಆಗಮಿಸಿ, ಹೇರೋಹಳ್ಳಿಯ ಪಾಲಿಕೆ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಈವರೆಗೆ ಸುಮಾರು 20 ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಇವರು ಕಣಕ್ಕಿಳಿದಿದ್ದಾರೆ.
ಇಂದು ಗಾಂಧಿ ಗೆಟಪ್‌ನಲ್ಲಿ ಶಂಭುಲಿಂಗೇಗೌಡರು ಟಿವಿಎಸ್ ಮೊಪೆಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಾದ್ಯಂತ ಗಾಂಧಿ ವೇಷ ತೊಟ್ಟು, ಕನ್ನಡ ಬಾವುಟ ಕಟ್ಟಿಕೊಂಡು, ತನ್ನ ಪರ ತಾವೇ ಒಬ್ಬಂಟಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಮಾಣಿಕವಾಗಿ ಎಲ್ಲಿ ತನಕ ಅಭ್ಯರ್ಥಿಗಳು ಗೆಲ್ಲುವುದಿಲ್ಲವೋ ಅಲ್ಲಿವರೆಗೆ ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ಪ್ರಾಮಾಣಿಕರನ್ನು ಗೆಲ್ಲಿಸಿ ಎಂಬ ಧ್ಯೇಯದೊಂದಿಗೆ ಶಂಭುಲಿಂಗೇಗೌಡರು ಪ್ರಚಾರ ನಡೆಸುತ್ತಿದ್ದಾರೆ.