ಬೆಂಗಳೂರು : ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪ್ರಕರಣ ರಾಜಾಕೀಯದತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಯಾಕಂದರೆ ಸದ್ಯ ಘಟನೆಗೆ ಪ್ರಮುಖ ಸಾಕ್ಷಿಯಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಘಟನೆ ಸಂಬಂಧ ವಿವರಣೆ ನೀಡಿದ್ದಾರೆ.
ಸದ್ಯ ಸಿಸಿಬಿ ಮೂಲಗಳ ಪ್ರಕಾರ ಘಟನೆಗೆ ರಾಜಾಕೀಯ ದ್ವೇಷ ಕಾರಣ ಎಂದು ಅಂಖಡ ಶ್ರೀನಿವಾಸಮೂರ್ತಿ ಆರೋಪಿಸಿದ್ದಾರೆ. ನಾನು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿ ಬಳಿಯ ಕಾವಲ್ ಬೈರಸಂದ್ರ ಬಳಿ ಹುಟ್ಟಿ ಬೆಳೆದಿದ್ದೇನೆ. ನನ್ನ ಹಿರಿಯರು ಕಟ್ಟಿದ ಮನೆಯಾಗಿದ್ದು, ನನ್ನ ಪತ್ನಿ ಸೇರಿ ಕುಟುಂಬಸ್ಥರಲ್ಲಿ ಕೆಲವರು ಕಾರ್ಪೋರೇಟರ್ ಆಗಿದ್ದಾರೆ. ನಾನು ಕೂಡ ಶಾಸಕನಾಗಿದ್ದು, ನಾನು ಇರುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರಿದ್ದರೂ ಕೂಡ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದಿದ್ದಾರೆ.
ಘಟನೆ ನಡೆಯಲು ನನ್ನ ಅಕ್ಕನ ಮಗನ ಪೋಸ್ಟ್ ನೆಪ ಮಾತ್ರವಾಗಿದೆ. ಆಗಸ್ಟ್ 11ರಂದು ನವೀನ್ ಪೋಸ್ಟ್ ಹಾಕಿದಾಗ ಕಾನೂನು ಕ್ರಮ ಜರುಗಿಸಲು ನಾನೇ ಪೊಲೀಸರಿಗೆ ಸೂಚಿಸಿದ್ದೆ. ಆದರೆ ನಾನು ಹುಟ್ಟಿ ಬೆಳೆದ ಮನೆ, ಮಕ್ಕಳ ಭವಿಷ್ಯದ ದಾಖಲೆ ಪತ್ರ, ಕಡತಗಳು, ನನ್ನ ಹಿರಿಯರ ಕಾಲದ ವಾಹನಗಳು ಸುಟ್ಟು ಕರಕಲಾಗಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಜಾಕೀಯ ದ್ಷೇಷ ಘಟನೆಗೆ ಕಾರಣ: ನಾನು ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ನಿಂದ ಗೆದ್ದವನು. ನನ್ನ ಏಳಿಗೆಯನ್ನ ಸಹಿಸಲು ಆಗದ ಕೆಲವರು ಈ ಕೃತ್ಯ ಮಾಡಿರಬಹುದು. ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್, ಪುಲಕೇಶಿ ನಗರದ ಕಾರ್ಪೋರೇಟರ್ ಅಬ್ದುಲ್ ರಕೀಬ್ ಜಾಕೀರ್, ಸರ್ವಜ್ಞ ನಗರದ ಮಹಿಳಾ ಕಾರ್ಪೋರೇಟರ್ ಇರ್ಷಾದ್ ಬೆಗಂ ಪತಿ ಬಂಧಿತ ಖಲಿಂ ಪಾಷಾ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ನನ್ನ ಜೊತೆ ಆತ್ಮೀಯರಾಗಿರಲಿಲ್ಲ.
ಮಾಜಿ ಮೇಯರ್ ಸಂಪತ್ ರಾಜ್ ಪುಲಕೇಶಿ ನಗರ ಕ್ಷೇತ್ರದ ಟಿಕೆಟ್ ಬಯಸಿದ್ದರು. ಆದರೆ ಸಿಗದೆ ಅವರಿಗೆ ಬೇರೆ ಕ್ಷೇತ್ರದಿಂದ ಟಿಕೆಟ್ ಸಿಕ್ಕು ಸೋಲು ಕಂಡರು. ಸದ್ಯ ನಾನಿರುವ ಕ್ಷೇತ್ರದಿಂದ ನನ್ನ ಕುಗ್ಗಿಸಿ ಮೇಲೆ ಬರುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನನಗೆ ಅನುಮಾನ ಇರುವ ಪ್ರಕಾರ ಪ್ರಕರಣದಲ್ಲಿ ಬಂಧಿತನಾಗಿರುವ ಎಸ್ಡಿಪಿಐ ಮುಖಂಡ ಮುಜಾಮಿಲ್ ಪಾಷಾ ಕೂಡ ನನ್ನೆದುರು ಸೋಲು ಕಂಡಿದ್ದರು. ಹೀಗಾಗಿ ಎಲ್ಲರೂ ಜೊತೆ ಸೇರಿ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಸದ್ಯ ಘಟನೆ ಕುರಿತು ಸುಮಾರು 5 ಪುಟಗಳ ಹೇಳಿಕೆಯನ್ನ ಸಿಸಿಬಿ ಡಿಸಿಪಿ ರವಿ ಕುಮಾರ್ ದಾಖಲಿಸಿದ್ದು, ಘಟನೆ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯ ಪ್ರಾಥಮಿಕವಾಗಿ ತನಿಖೆಗೆ ಒಳಗಾದ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.