ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಮಾಡುವ ದಿನ ಮುಕ್ತಾಯವಾಗಿರುವ ಹಿನ್ನೆಲೆ ಟಿಕೆಟ್ಗಾಗಿ ಫೈಟ್ ಶುರುವಾಗಿದೆ. ಕೆಲ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದು, ತಮಗೆ ಟಿಕೆಟ್ ಅಂತಿಮಗೊಳಿಸಿ ಕೊಡುವಂತೆ ರಾಜ್ಯ ನಾಯಕರನ್ನು ಒತ್ತಾಯಿಸಲು ಬೆಂಬಲಿಗರ ಸಮೇತ ಬೆಂಗಳೂರಿಗೆ ಆಗಮಿಸಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿರುವ ಬಸವರಾಜ ಖೋತ ತಮ್ಮ ನೂರಾರು ಬೆಂಬಲಿಗರೊಂದಿಗೆ ಬುಧವಾರ ಶಿವಾನಂದ ವೃತ್ತ ಸಮೀಪ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಶಕ್ತಿ ಪ್ರದರ್ಶನ ಮಾಡಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ಕಾಂಗ್ರೆಸ್ನ ಹೆಚ್ಚು ನಾಯಕರು ಹೊಂದಿದ್ದಾರೆ. ಇವರಲ್ಲಿ ಮಾಜಿ ಸಚಿವ ಎಸ್ ಆರ್ ಪಾಟೀಲ್ ಸಹ ಒಬ್ಬರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಟಿಕೆಟ್ಗಾಗಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇರುವ ಹಿನ್ನೆಲೆ ಈಗಲೇ ತಮ್ಮ ಬೆಂಬಲಿಗರೊಂದಿಗೆ ಬಸವರಾಜ್ ಆಗಮಿಸಿ ಪ್ರಭಾವ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಲಿ ಬಾದಾಮಿ ಕ್ಷೇತ್ರದ ಸದಸ್ಯರಾಗಿದ್ದು, ಬಾಗಲಕೋಟೆ ಜಿಲ್ಲೆಯ ಪ್ರತಿನಿಧಿ ಆಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕರು ಆಗಿರುವ ಹಿನ್ನೆಲೆ ಕಾಂಗ್ರೆಸ್ನಲ್ಲಿ ಸಾಕಷ್ಟು ಪ್ರಭಾವಿ ಸ್ಥಾನ ಹೊಂದಿದ್ದಾರೆ. ಹೀಗಾಗಿ ಇವರ ಪ್ರಭಾವದ ಮೇಲೆ ಟಿಕೆಟ್ ಗಿಟ್ಟಿಸಲು ಬಸವರಾಜ್ ಮುಂದಾಗಿದ್ದು, ಅವರ ನಿವಾಸದ ಮುಂದೆ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಕೇಳಿದ್ರೆ ನಮ್ಮ ಮನೆಗೆ 4 ಟಿಕೆಟ್ ಬೇಕಾದ್ರೂ ಕೊಡ್ತಾರೆ: ಶಾಮನೂರು ಶಿವಶಂಕರಪ್ಪ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಯಲ್ಲಿರುವ ಹಿನ್ನೆಲೆ ಇಂದು ಪ್ರತಿಪಕ್ಷ ನಾಯಕರನ್ನು ಮಾತ್ರ ಭೇಟಿಯಾಗಿ ಬಸವರಾಜ್ ತೆರಳಿದ್ದಾರೆ.
2023 ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ದಿನಾಂಕ ನಿನ್ನೆಯಷ್ಟೇ ಮುಕ್ತಾಯವಾಗಿದ್ದು, ಇಂದಿನಿಂದಲೇ ಆಕಾಂಕ್ಷಿಗಳ ಟಿಕೆಟ್ ಗಿಟ್ಟಿಸುವ ಪ್ರಯತ್ನ ಆರಂಭವಾಗಿದೆ.
ತಮ್ಮ ಬೆಂಬಲಿಗರ ಜೊತೆ ಆಗಮಿಸಿರುವ ಬಸವರಾಜ ಮಾಧ್ಯಮಗಳ ಜೊತೆ ಮಾತನಾಡಿ, ಬೀಳಗಿ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಪಕ್ಷದಿಂದ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಆದರೂ ಇಂದು ಪ್ರತಿಪಕ್ಷ ನಾಯಕರನ್ನು ಭೇಟಿಯಾಗಿ ಮನವಿ ಮಾಡಲು ಬಂದಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ನನಗೆ ಸ್ಪರ್ಧಿಸುವ ಅವಕಾಶ ಲಭಿಸಿದರೆ ಗೆಲುವು ಖಚಿತ. ಪಕ್ಷದ ರಾಜ್ಯ ನಾಯಕರು ಹಾಗೂ ಹೈಕಮಾಂಡ್ನನ್ನ ಪರ ಒಲವು ವ್ಯಕ್ತಪಡಿಸಲಿದೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.