ಬೆಂಗಳೂರು: ವಾಹನ ಚಾಲನೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿ ಫೋನ್‌ನಲ್ಲಿ ಮಾತನಾಡುತ್ತ ಸ್ಕೂಟರಿಗೆ ಡಿಕ್ಕಿ ಹೊಡೆದ ಟಾಟಾ ಏಸ್ ಚಾಲಕನೊಬ್ಬ, ಈ ಬಗ್ಗೆ ಪ್ರಶ್ನಿಸಿದ ದ್ವಿಚಕ್ರ ವಾಹನ ಸವಾರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆ ನಿನ್ನೆ ಮದ್ಯಾಹ್ನ ರಾಮಮೂರ್ತಿನಗರ ಬ್ರಿಡ್ಜ್ ಬಳಿ ನಡೆದಿದೆ. ತಮ್ಮ ತಂದೆಯೊಂದಿಗೆ ತೆರಳುತ್ತಿದ್ದ ಪ್ರಕಾಶ್ ಎಂಬುವವರ ಸ್ಕೂಟರಿನ ಬಲಭಾಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ಚಾಲಕ ಫೋನ್‌ನಲ್ಲಿ ಮಾತನಾಡುತ್ತಾ ಬಂದು ಡಿಕ್ಕಿ ಹೊಡೆದಿದ್ದಾನೆ.
ಇದನ್ನ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಆರೋಪಿ ಚಾಲಕ ತನ್ನ ವಾಹನದಿಂದ ಇಳಿದು ಚಾಕು ಹಿಡಿದು ಸಾರ್ವಜನಿಕರ ಎದುರೇ ಬೆದರಿಕೆ ಹಾಕಿದ್ದಾನೆ. ಘಟನೆ ಕುರಿತು ಪ್ರಕಾಶ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಮಮೂರ್ತಿನಗರ ಠಾಣಾ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಬಿಎಂಟಿಸಿ ಬಸ್ ಹರಿದು ವೃದ್ದನ ಕಾಲು ತುಂಡು: ಮತ್ತೊಂದು ಪ್ರಕರಣದಲ್ಲಿ ಬಿಎಮ್ಟಿಸಿ ಬಸ್ ಹರಿದ ಪರಿಣಾಮ ವೃದ್ಧರೊಬ್ಬರ ಎರಡೂ ಕಾಲುಗಳು ತುಂಡಾಗಿರುವ ಘಟನೆ ನಿನ್ನೆರಾತ್ರಿ ಯಶ್ವಂತಪುರ ಸರ್ಕಲ್ ಬಳಿ ನಡೆದಿದೆ. ರಸ್ತೆ ದಾಟಲು ನಿಂತಿದ್ದ 60 ವರ್ಷದ ವೃದ್ಧನ ಕಾಲುಗಳ ಮೇಲೆ ಬಸ್ಸಿನ ಚಕ್ರಗಳು ಹರಿದಿದ್ದು ಎರಡು ಕಾಲುಗಳು ತುಂಡಾಗಿವೆ. ಗಾಯಾಳು ವೃದ್ದರನ್ನು ಚಿಕಿತ್ಸೆಗಾಗಿ ಕೆ.ಸಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೆರೊಂದು ಘಟನೆಯೊಂದರಲ್ಲಿ ವಾಟರ್ ಟ್ಯಾಂಕರ್ವೊಂದು ಹೋಟೆಲ್ ತ್ಯಾಜ್ಯ ತುಂಬಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋದಲ್ಲಿದ್ದ ತ್ಯಾಜ್ಯ ರಸ್ತೆ ಮೇಲೆಲ್ಲ ಬಿದ್ದ ಪರಿಣಾಮ ಕೆಲ ವಾಹನ ಸವಾರರು ರಸ್ತೆಗೆ ಜಾರಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತ್ಯಾಜ್ಯ ಬಿದ್ದ ಕಡೆಯೆಲ್ಲ ಡಸ್ಟ್ ಪೌಡರ್ ಹಾಕಿ ವಾಹನಗಳು ಜಾರದಂತೆ ಮಾಡಿದ್ದಾರೆ.
ನೀರಿನಲ್ಲಿ ಮುಳುಗಿ ಯುವಕರ ಸಾವು( ಮಂಡ್ಯ): ಕಾವೇರಿ ನದಿ ನೀರಿನಲ್ಲಿ ಮುಳುಗಿ ಯುವಕರಿಬ್ಬರ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿತಾಣವಾದ ಬಲಮುರಿಯಲ್ಲಿ ನಡೆದಿದೆ. ಮೈಸೂರು ಮೂಲದ ಧನರಾಜ್(21) ಹಾಗು ಪ್ರಸನ್ನ(33) ಮೃತ ಯುವಕರಾಗಿದ್ದು ಪ್ರವಾಸಕ್ಕೆಂದು ಬಂದು ನದಿಯಲಿ ಈಜಲು ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸದ್ಯ ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆಯಲ್ಲಿ ಮನೆ ಕುಸಿದು ಇಬ್ಬರ ಸಾವು: ಗುರುವಾರದಂದು ಮಳೆ ಹಾಗೂ ಸಿಡಿಲಿಗೆ ಮನೆ ಕುಸಿದು ಮಹಿಳೆಯರಿಬ್ಬರು ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿತ್ತು. ರಾತ್ರಿ ಸುರಿದ ಮಳೆಗೆ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಯಂಕುಬಾಯಿ ಕುಲಕರ್ಣಿ ಮತ್ತು ಶಾರಾದಾ ಪತ್ತಾರ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಯಂಕುಬಾಯಿ ಕುಲಕರ್ಣಿ ಒಬ್ಬರೇ ಇದ್ದ ಕಾರಣ ಅವರ ಜತೆಗೆ ಶಾರಾದ ಪತ್ತಾರ ಯಂಕುಬಾಯಿ ಅವರ ಮನೆಯಲ್ಲೇ ನಿದ್ರೆ ಮಾಡುತ್ತಿದ್ದರು. ಮೆಲ್ಛಾವಣಿ ಕುಸಿತದಿಂದ ಇಬ್ಬರು ಮೃತ ಪಟ್ಟಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ವೃದ್ಧನ ಎರಡೂ ಕಾಲುಗಳು ಕಟ್