ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಇಂದು ಹೊಸ ಅತಿಥಿಯ ಆಗಮನವಾಗಿದೆ. ಕಾವೇರಿಯಲ್ಲಿ ಆಶ್ರಯ ಪಡೆದಿರುವ ಕೃಷ್ಣೆ ಕರುವಿಗೆ ಜನ್ಮ ನೀಡಿದ್ದು, ಸಿಎಂ ನಿವಾಸದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಡುಗೊರೆಯಾಗಿ ಪಡೆದಿರುವ ಹಸುಗಳನ್ನು, ತಮ್ಮ ಸರ್ಕಾರಿ ನಿವಾಸ ಕಾವೇರಿಯ ಶೆಡ್ನಲ್ಲಿ ಪೋಷಿಸುತ್ತಿದ್ದಾರೆ. ಗಿರ್ ತಳಿಯ ಕಾವೇರಿ ಹಾಗೂ ಕೃಷ್ಣೆ ಹಸುಗಳ ಜೊತೆ ಪುಟ್ಟ ಕರು ಭೀಮ ಸಿಎಂ ನಿವಾಸದ ಆವರಣದಲ್ಲಿ ಬೀಡುಬಿಟ್ಟಿವೆ.
ಇಂದು ರಾತ್ರಿ 8.30 ರ ಸಮಯದಲ್ಲಿ ಕೃಷ್ಣೆ ಗಂಡು ಕರುವಿಗೆ ಜನ್ಮ ನೀಡಿದ್ದು, ಸಿಎಂ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಕಾವೇರಿ ಹಸುವಿನ ಕರು ಭೀಮನಿಗೆ ಇದೀಗ ಕೃಷ್ಣೆಯ ಕರುವಿನ ಸಾಥ್ ಸಿಕ್ಕಂತಾಗಿದೆ.
ಪ್ರತಿ ದಿನವೂ ಬೆಳಗ್ಗೆ ವಾಯುವಿಹಾರಕ್ಕೆ ತೆರಳುವ ಸಿಎಂ ಬಿ.ಎಸ್. ಯಡಿಯೂರಪ್ಪ ಕೆಲಕಾಲ ಪುಟ್ಟ ಕರು ಭೀಮನ ಜೊತೆ ಕಳೆಯುತ್ತಾರೆ. ಸಿಎಂ ವಾಕಿಂಗ್ ಬಂದರೆಂದರೆ ಭೀಮ ಸಿಎಂರತ್ತ ನುಗ್ಗಿ ಬರುತ್ತದೆ. ಸಿಎಂ ಬಿಎಸ್ವೈ ಕೂಡ ಕರುವಿನ ಮೈದಡವುತ್ತಾ ಕಾಲ ಕಳೆಯುತ್ತಾರೆ. ಇದೀಗ ಮತ್ತೊಂದು ಕರು ಸಿಎಂ ನಿವಾಸಕ್ಕೆ ಆಗಮಿಸಿದ್ದು ಸಿಎಂಗೆ ಮತ್ತಷ್ಟು ಖುಷಿ ನೀಡಿದೆ.
ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗಿರ್ ತಳಿಯ ಎರಡು ಹಸು ಒಂದು ಕರುವನ್ನು ಉಡುಗೊರೆಯಾಗಿ ನೀಡಿದ್ದರು. ಅವುಗಳಲ್ಲಿ ಹಾಲು ಕೊಡುವ ಹಸುವಿಗೆ ಕಾವೇರಿ ಮತ್ತೊಂದು ಹಸುವಿಗೆ ಕೃಷ್ಣೆ ಹಾಗೂ ಕರುವಿಗೆ ಭೀಮ ಎಂದು ನಾಮಕರಣ ಮಾಡಿ ಕಾವೇರಿ ನಿವಾಸದ ಆವರಣದಲ್ಲಿಯೇ ಶೆಡ್ ನಿರ್ಮಿಸಿ ಸಾಕಲಾಗುತ್ತಿದೆ.