ಬೆಂಗಳೂರು: ಆಯುಷ್ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಬುಧವಾರ ಬೆಳಗ್ಗೆ 6.30 ರಿಂದ 8.30 ಗಂಟೆಯವರೆಗೆ ವಿಧಾನಸೌಧದ ಮುಂಭಾಗ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಲ್ಲೋಟ್ ನೆರವೇರಿಸುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಎಂ. ರಾಜೀವ್ ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅನೇಕ ಹಿರಿಯ ಸಚಿವರು, ಸಂಸದರು, ವಿಧಾನ ಸಭೆ ಸದಸ್ಯರುಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಇನ್ನಿತರ ಗಣ್ಯರು ಭಾಗಿಯಾಗಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಬಿ.ಕೆ. ವೆಂಕಟೇಶ್ ಪ್ರಸಾದ್, ಅಂತಾರಾಷ್ಟ್ರೀಯ ಅಥ್ಲೀಟ್ ಅಂಜು ಚಾರ್ಜ್, ಚಲನಚಿತ್ರ ಅಭಿನೇತ್ರಿಯರಾದ ಭಾವನಾ ರಾಮಣ್ಣ, ಅಧಿತಿ ಪ್ರಭುದೇವ ಉಪಸ್ಥಿತಿ ಇರಲಿದೆ. ಯೋಗ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಆಗಸ್ ಇಂದ್ರ ಉದಯನ್, ಗುರೂಜಿ ಬಸವರಾಜ ಹಡಗಲ, ಯೋಗಿ ಮನಮೋಹನ ಸಿಂಗ್ ಭಂಡಾರಿ, ವಿಕ್ಟರ್ ಟ್ರುವಿಯಾನೋ, ಡಾ.ಪ್ರಕಾಶ್ ಆಮೆ, ಡಾ.ಮಂದಾಕೀಸಿ ಆಮೆ ಹಾಗೂ ರವೀಂದ್ರ ಸಾಹೊ ಪಾಲ್ಗೊಳ್ಳಲಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಘ, ಸಂಸ್ಥೆಗಳ ಸುಮಾರು 2,500ರಿಂದ 3,000ಕ್ಕೂ ಅಧಿಕ ಯೋಗಾಸಕ್ತರು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದು ಆಯುಷ್ ಇಲಾಖೆ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ:
- ಬೆಳಿಗ್ಗೆ 5:40ಕ್ಕೆ ಕಾರ್ಯಕ್ರಮದ ಸ್ಥಳದಲ್ಲಿ ಉಪಸ್ಥಿತಿ.
- ಬೆಳಿಗ್ಗೆ 5:45 ರಿಂದ 6:55ಕ್ಕೆ ವಿವಿಧ ಯೋಗ ಸಂಸ್ಥೆಗಳಿಂದ ಯೋಗ ಪ್ರದರ್ಶನ.
- ಬೆಳಿಗ್ಗೆ 7:00 ರಿಂದ 7:35ಕ್ಕೆ ಸಾಮಾನ್ಯ ಶಿಷ್ಟಾಚಾರದ ಯೋಗಾಭ್ಯಾಸ.
- ಬೆಳಿಗ್ಗೆ 8:30ಕ್ಕೆ ಸಭಾ ಕಾರ್ಯಕ್ರಮ
ಯೋಗ ನಡಿಗೆ: ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತರ ಆಶ್ರಯದಲ್ಲಿ ಮಂಗಳವಾರ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ "ವಸುಧೈವ ಕುಟುಂಬಕಂ” ಮತ್ತು “ಪ್ರತಿ ಅಂಗಳದಲ್ಲಿ ಯೋಗ” ಎಂಬ ಘೋಷ ವಾಕ್ಯದ ಅಡಿ ಯೋಗ ನಡಿಗೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು. ವಿಶ್ವ ಯೋಗ ದಿನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ನಾಳೆಯ ಯೋಗ ದಿನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಂದು ಮಂಗಳವಾರ ಯೋಗ ನಡಿಗೆ ಆಯೋಜಿಸಿದ್ದೇವೆ. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯದ ಮಾರ್ಗವಾಗಿ ಪರಿಗಣಿಸಲಾಗಿದೆ. ಪ್ರತಿದಿನ ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆ ಸಾಧ್ಯವಾಗಲಿದೆ ಎಂದರು. ಯೋಗ ನಡಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯೋಗದ ಮಹತ್ವ, ಉಪಯೋಗದ ಬಗ್ಗೆ ಅರಿವು ಮೂಡಿಸುವ ಸಂದೇಶ ಫಲಕಗಳನ್ನು ಪ್ರದರ್ಶನ ಮಾಡಿದರು.
ಇದನ್ನೂ ಓದಿ: International Yoga Day: ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಒತ್ತಡ ನಿವಾರಣೆ - ಈರಣ್ಣ ಕಡಾಡಿ