ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮೇ 27 ರಿಂದ ಜೂನ್ 8 ರವರೆಗೆ ಗೋವಾದ ಫೋಂಡಾದಲ್ಲಿರುವ ಶ್ರೀ ರಾಮನಾಥ ದೇವಸ್ಥಾನದಲ್ಲಿ 8ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಮೋಹನ ಗೌಡ ತಿಳಿಸಿದರು.
ಕಳೆದ 7 ವರ್ಷದಲ್ಲಿ ನಡೆದ ಅಖಿಲ ಭಾರತೀಯ ಹಿಂದೂ ಅಧಿವೇಶನದಿಂದಾಗಿಯೇ ದೇಶದಾದ್ಯಂತ ಹಿಂದೂ ರಾಷ್ಟ್ರ ಸಂಕಲ್ಪ ವಿಷಯದಲ್ಲಿ ದೊಡ್ಡ ಪ್ರಮಾಣದ ಜಾಗೃತಿ ಉಂಟಾಗಿದೆ. ಈ ಅಧಿವೇಶನಕ್ಕೆ ಭಾರತದ 26 ರಾಜ್ಯಗಳ ಸಹಿತ ಬಾಂಗ್ಲಾದೇಶದಿಂದ 200ಕ್ಕಿಂತ ಅಧಿಕ ಹಿಂದೂ ಸಂಘಟನೆಗಳ 800 ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಹೊಸ ಸರ್ಕಾರದ ಸ್ಥಾಪನೆಯ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿ, ಸಮಾನ ನಾಗರಿಕ ಕಾನೂನು, ಕಲಂ 370 ರದ್ದು ಮಾಡುವುದು, ಗೋ ಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪುನರ್ ನಿರ್ಮಾಣ ಇತ್ಯಾದಿಯಾಗಿ ಕಳೆದ ಅನೇಕ ವರ್ಷಗಳಿಂದ ನೆನೆಗುದಿಯಲ್ಲಿದ್ದ ಹಿಂದೂಗಳ ಸಮಸ್ಯೆಗಳ ಮೇಲೆ ವಿಚಾರ ವಿನಿಮಯ ಮಾಡಿ ಸರಕಾರಕ್ಕೆ ನಿರ್ಧಿಷ್ಟ ಕ್ರಮಕೈಗೊಳ್ಳುವ ದೃಷ್ಟಿಯಿಂದ ಸಂಘಟನಾತ್ಮಕ ಪ್ರಯತ್ನ ಮಾಡಲಾಗುವುದು ಎಂದರು.
ಇದರೊಂದಿಗೆ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದ ಹಿಂದೂಗಳ ರಕ್ಷಣೆಯ ಬಗ್ಗೆಯೂ ಚರ್ಚಿಸಲಾಗುವುದು. ಹಿಂದೂ ನ್ಯಾಯವಾದಿಗಳ ಅಧಿವೇಶನ, ಉದ್ಯಮಿಗಳ ಅಧಿವೇಶನ, ಸೋಷಿಯಲ್ ಮೀಡಿಯಾ ಕಾನ್‌ಕ್ಲೇವ್ ಹಾಗೂ ಹಿಂದೂ ರಾಷ್ಟ್ರ ಸಂಘಟನೆ ಪ್ರಶಿಕ್ಷಣ ಮತ್ತು ಅಧಿವೇಶನಗಳನ್ನು ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.