ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹವಾಲಾ ಹಣ ಸಾಗಣೆ ಆರೋಪ ಪ್ರಕರಣದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಬಂಧಿಸಿದಾಗ ರಾಜ್ಯದಲ್ಲಿ ನಡೆದ ಬಂದ್ ಮತ್ತು ಪ್ರತಿಭಟನೆಗಳಿಂದ ಅಂದಾಜು 82 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಡಿಕೆಶಿ ಪರ ನಡೆಸಿದ ಬಂದ್ ಹಾಗೂ ಪ್ರತಿಭಟನೆಗಳಿಂದ ಆಗಿರುವ ನಷ್ಟವನ್ನು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕನಕಪುರದ ರವಿಕುಮಾರ್ ಕೆಂಚನಹಳ್ಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಮಾಹಿತಿ ನೀಡಿ, ರಾಮನಗರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿರುವ ಪ್ರಕರಣಗಳ ವಿವರವನ್ನು ಪೀಠಕ್ಕೆ ಸಲ್ಲಿಸಿದರು.
ಇನ್ನು ಡಿಕೆಶಿ ಬಂಧನ ವಿರೋಧಿಸಿ 2019ರ ಸೆ.4ರಿಂದ 11ವರೆಗೆ ನಡೆದ ಪ್ರತಿಭಟನೆಗಳಲ್ಲಿ ಒಟ್ಟು 82 ಕೋಟಿ ರೂ. ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟವಾಗಿದೆ. ಈ ಸಂಬಂಧ 19 ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದು, 40 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದರು.
ಇನ್ನು ಸುಪ್ರೀಂಕೋರ್ಟ್ ಕೊಡುಂಗಲೂರು ಪ್ರಕರಣದಲ್ಲಿ ನೀಡಿರುವ ಆದೇಶದ ಮಾದರಿಯಲ್ಲೇ ಆಗಿರುವ ನಷ್ಟದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರೇ ಅದನ್ನು ಭರಿಸುವಂತೆ ಹೊಣೆ ಮಾಡಲು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದರು. ಸರ್ಕಾರದ ವಿವರಗಳನ್ನು ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಿದೆ.